ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಓವರ್‌ಲೋಡ್ ಹಾಕಲೇಬೇಡಿ ಬೀಳುತ್ತೆ ದಂಡ!

Pakka News Web • 4 ಜುಲೈ 2026,

ಕಾರವಾರ: ಜಿಲ್ಲೆಯ ರಸ್ತೆಗಳಲ್ಲಿ ಸಂಚರಿಸುವಾಗ ನಿಯಮ ಮೀರಿ ಮಿತಿಮೀರಿದ ಸರಕು ತುಂಬಿಕೊಂಡು (ಓವರ್‌ಲೋಡ್) ಸಾಗುವ ವಾಹನಗಳ ಆಟ ಇನ್ಮುಂದೆ ನಡೆಯುವುದಿಲ್ಲ. ಏಕೆಂದರೆ, ಇಂತಹ ಕಾನೂನುಬಾಹಿರ ಮತ್ತು ಅಪಾಯಕಾರಿ ಸಾಗಾಟದ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಹಗಲಿರುಳು ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಖಡಕ್ ಸೂಚನೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇವಲ ಒಂದೇ ರಸ್ತೆಗೆ ಸೀಮಿತವಾಗದೆ ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ನಿಗಾ ವಹಿಸುವಂತೆ ಸಾರಿಗೆ ಇಲಾಖೆಯನ್ನು ಎಚ್ಚರಿಸಿದ್ದಾರೆ. ಕೇವಲ ಸರಕು ವಾಹನಗಳಷ್ಟೇ ಅಲ್ಲದೆ, ಖಾಸಗಿ ಬಸ್‌ಗಳ ಡಿಕ್ಕಿಗಳಲ್ಲಿ ಪ್ರಯಾಣಿಕರ ಲಗೇಜ್ ಹೊರತುಪಡಿಸಿ ಇತರ ವಾಣಿಜ್ಯ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಿಸುವುದರ ಮೇಲೂ ವ್ಯಾಪಕ ತಪಾಸಣೆ ನಡೆಸಲು ಆದೇಶಿಸಲಾಗಿದೆ.

ಅದರಲ್ಲೂ ಮುಖ್ಯವಾಗಿ, ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಇಬ್ಬರು ಚಾಲಕರು ಕಡ್ಡಾಯವಾಗಿ ಇರುವರೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಮೂಲಕ ಪ್ರಯಾಣಿಕರ ಪ್ರಾಣಕ್ಕೆ ಹೆಚ್ಚಿನ ಭದ್ರತೆ ನೀಡಲು ಮುಂದಾಗಿದ್ದಾರೆ.

ಇದೇ ವೇಳೆ ಕಾರವಾರದ ಫ್ಲೈ ಓವರ್ ಕೆಳಗೆ ಅನಧಿಕೃತವಾಗಿ ತಲೆ ಎತ್ತಿರುವ ಅಂಗಡಿಗಳು ಮತ್ತು ಜನವಸತಿಯ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮಾರ್ಗಸೂಚಿಯಂತೆ ಶೀಘ್ರದಲ್ಲೇ ಅಗತ್ಯ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ತಾಕೀತು ಮಾಡಿದರು.

ಇತ್ತೀಚಿನ ದಿನಗಳಲ್ಲಿ ಕುಮಟಾ ಭಾಗದಲ್ಲಿ ಅಪಘಾತಗಳ ಸರಣಿ ಹೆಚ್ಚಾಗುತ್ತಿರುವುದನ್ನು ಗಮನಿಸಿ, ತಕ್ಷಣವೇ ಅಗತ್ಯವಿರುವೆಡೆ ಬೀದಿದೀಪಗಳನ್ನು ಅಳವಡಿಸಲು ಹಾಗೂ ರಸ್ತೆಗಳಿಗೆ ಲೈನ್ ಮಾರ್ಕ್ ಮತ್ತು ‘ಕ್ಯಾಟ್ ಐ’ಗಳನ್ನು ಅಳವಡಿಸಲು ಸೂಚಿಸಿದರು. ಮಳೆಗಾಲದ ಪ್ರಮುಖ ಆಕರ್ಷಣೆಯಾಗಿರುವ ಹೆದ್ದಾರಿ ಪಕ್ಕದ ಗುಡ್ಡಗಳ ಜಲಪಾತಗಳ ಬಳಿ ಸಾರ್ವಜನಿಕರು ರಸ್ತೆಯ ಮೇಲೆಯೇ ವಾಹನ ನಿಲ್ಲಿಸಿ ಫೋಟೋ-ವಿಡಿಯೋ ಹಾಗೂ ರೀಲ್ಸ್ ಚಿತ್ರೀಕರಣದಲ್ಲಿ ಮುಳುಗುತ್ತಿರುವುದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಇದನ್ನು ತಡೆಯಲು ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ‘ನೋ ಪಾರ್ಕಿಂಗ್’ ಸೇರಿದಂತೆ ಕಟ್ಟುನಿಟ್ಟಿನ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯ ಮತ್ತೊಂದು ದೊಡ್ಡ ಸವಾಲಾಗಿರುವ ಘಟ್ಟ ಪ್ರದೇಶದ ತಿರುವುಗಳ ಅಪಘಾತ ನಿಯಂತ್ರಣಕ್ಕೂ ಈ ಸಭೆಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಹೊರಗಿನಿಂದ ಬರುವ ಚಾಲಕರಿಗೆ ಮುಂದಿರುವ ಅಪಾಯಕಾರಿ ತಿರುವುಗಳ ಅರಿವಿರುವುದಿಲ್ಲ. ಹೀಗಾಗಿ, ಇಳಿಜಾರು ಆರಂಭವಾಗುವ ಸ್ಥಳದಿಂದಲೇ ಮುಂದೆ ಎಷ್ಟನೇ ತಿರುವು ಬರಲಿದೆ ಎಂಬ ಸಂಖ್ಯೆಗಳ ಮಾಹಿತಿಯನ್ನೊಳಗೊಂಡ ಸ್ಪಷ್ಟ ಸೂಚನಾ ಫಲಕಗಳನ್ನು ಹಾಕಲು ತೀರ್ಮಾನಿಸಲಾಗಿದೆ.

ಇದರೊಂದಿಗೆ ಎಲ್ಲಾ ಸೇತುವೆಗಳ ಬಳಿ ಸೂಚನಾ ಫಲಕ ಹಾಗೂ ರಾತ್ರಿ ವೇಳೆ ಸೇತುವೆಗಳು ಸ್ಪಷ್ಟವಾಗಿ ಗೋಚರಿಸುವಂತೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಪಘಾತ ವಲಯಗಳಾದ ‘ಬ್ಲಾಕ್ ಸ್ಪಾಟ್’ಗಳಲ್ಲಿ ವಿಶೇಷ ಸುರಕ್ಷತೆ, ವೇಗಮಿತಿ ಫಲಕಗಳು, ಬ್ಲಿಂಕರ್ಸ್ ಹಾಗೂ ಅತ್ಯಾಧುನಿಕ ANPR ಕೆಮೆರಾಗಳನ್ನು ಅಳವಡಿಸಿ ಇಡೀ ಹೆದ್ದಾರಿಯನ್ನು ಹದ್ದಿನ ಕಣ್ಣಿನ ಕಾವಲಿಗೆ ತರಲಾಗುತ್ತಿದೆ. ಜಿಲ್ಲೆಯ ನಾಗರಿಕರ ಜೀವ ರಕ್ಷಣೆಯ ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಸೇರಿದಂತೆ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು, ಹೆದ್ದಾರಿ ಸುರಕ್ಷತೆಯ ಹೊಸ ಮನ್ವಂತರಕ್ಕೆ ಕೈಜೋಡಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250