ಕಾರವಾರ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರ ಹಿತರಕ್ಷಣೆಗಾಗಿ ಮರುವಿನ್ಯಾಸಗೊಳಿಸಲಾದ ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್ (IndusInd General Insurance) (ಹಳೆಯ ರಿಲಯನ್ಸ್ ಜನರಲ್ ಇನ್ಶೂರೆನ್ಸ್) ಸಂಸ್ಥೆಯನ್ನು ನಿಯೋಜಿಸಲಾಗಿದೆ.
ಪ್ರಸಕ್ತ 2026ರ ಮುಂಗಾರು ಹಂಗಾಮಿಗೆ ಬೆಳೆ ಸಾಲ ಪಡೆಯುವ ಹಾಗೂ ಸಾಲ ಪಡೆಯದ ಜಿಲ್ಲೆಯ ಎಲ್ಲಾ ಅರ್ಹ ರೈತರು ವಿಮಾ ಕಂತನ್ನು ಪಾವತಿಸಿ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ. ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಈ ಯೋಜನೆಯಡಿ ವಿಶೇಷ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಮಾ ಯೋಜನೆಯ ಚಂದಾದಾರರಾಗಲು ಇಚ್ಛಿಸುವ ರೈತರು ಕಡ್ಡಾಯವಾಗಿ ರೈತ ಗುರುತಿನ ಸಂಖ್ಯೆಯನ್ನು (FID) ಹೊಂದಿರಬೇಕಾಗುತ್ತದೆ. ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಯೊಂದಿಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಪ್ರಸಕ್ತ ಸಾಲಿನ ಬೆಳೆ ನಮೂದಾಗಿರುವ ಪಹಣಿ ಪತ್ರಿಕೆ (RTC), ಸ್ವಯಂ ದೃಢೀಕರಣ ಪತ್ರ, ನಾಮಿನಿ ವಿವರಗಳು ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ, ತಮ್ಮ ವ್ಯಾಪ್ತಿಯ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಲ್ಲಿ ನಿಗದಿಪಡಿಸಿದ ಅಂತಿಮ ದಿನಾಂಕದ ಒಳಗಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ವಿಮಾ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ, ಅವರು ನೋಂದಣಿಯ ಅಂತಿಮ ದಿನಾಂಕಕ್ಕಿಂತ ಕನಿಷ್ಠ 7 ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ರೂಪದಲ್ಲಿ ನಿರಾಕರಣಾ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ರೈತರ ಅನುಕೂಲಕ್ಕಾಗಿ ಪ್ರತಿ ಎಕರೆಗೆ ನಿಗದಿಪಡಿಸಲಾದ ಒಟ್ಟು ವಿಮಾ ಮೊತ್ತ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ವಿವರಗಳನ್ನು ಇಲಾಖೆ ಪ್ರಕಟಿಸಿದೆ. ಅದರಂತೆ, ಪ್ರತಿ ಎಕರೆ ಅಡಿಕೆ ಬೆಳೆಗೆ ಒಟ್ಟು 51,200 ರೂಪಾಯಿ ವಿಮಾ ಮೊತ್ತವಿದ್ದು ರೈತರು 2,560 ರೂಪಾಯಿ ಕಂತು ಪಾವತಿಸಬೇಕು. ಕರಿಮೆಣಸು ಬೆಳೆಗೆ 18,800 ರೂಪಾಯಿ ವಿಮಾ ಮೊತ್ತಕ್ಕೆ 940 ರೂಪಾಯಿ ಕಂತು, ಶುಂಠಿ ಬೆಳೆಗೆ 52,000 ರೂಪಾಯಿ ವಿಮಾ ಮೊತ್ತಕ್ಕೆ 2,600 ರೂಪಾಯಿ ಕಂತು ಹಾಗೂ ಮಾವು ಬೆಳೆಗೆ ಪ್ರತಿ ಎಕರೆಗೆ 32,000 ರೂಪಾಯಿ ಒಟ್ಟು ವಿಮಾ ಮೊತ್ತವಿದ್ದು ರೈತರು 5,440 ರೂಪಾಯಿಗಳ ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಮಾಹಿತಿ ಅಥವಾ ಸಂದೇಹಗಳಿದ್ದಲ್ಲಿ ರೈತರು ತಮ್ಮ ತಮ್ಮ ತಾಲೂಕಿನ ತೋಟಗಾರಿಕಾ ಇಲಾಖೆಯ ಕಚೇರಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
