ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯ ಹಿನ್ನೆಲೆ ಜುಲೈ 9ರ ಬೆಳಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜೊತೆಗೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ನದಿ, ಹೊಳೆ, ಜಲಾಶಯ, ಸಮುದ್ರ ತೀರ ಹಾಗೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಹಾಗೂ ಪ್ರವಾಸಿಗರು ಜಲಪಾತ ಮತ್ತು ನದಿ ತೀರ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ತಿಳಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು 24×7 ಸಕ್ರಿಯಗೊಳಿಸಲಾಗಿದ್ದು, ನೆರವಿಗಾಗಿ 08382-229857 ಅಥವಾ 9483511015 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ಪ್ರಕಟಿಸಿದೆ.
ರವಿವಾರ ಸುರಿದ ಮಳೆಗೆ ನಗರದ ಕಾಜುಭಾಗದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಬಳಿಯ ಮಾರಿಯಾ ನಗರದ ಮನೆಯೊಂದರ ಮೇಲೆ ಬೃಹತ್ ಗಾತ್ರದ ತೆಂಗಿನ ಮರ ಒಂದು ಉರುಳಿ ಬಿದ್ದ ಪರಿಣಾಮ, ಮನೆ ಹಾನಿಗೊಂಡಿದೆ ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ರವಿವಾರ ಬೆಳಗ್ಗೆಯಿಂದ ಸತತವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಹಲವಾರು ಕಡೆ ಮರ ಉರಳಿ ಬಿದ್ದ ಪರಿಣಾಮ ಸಾಕಷ್ಟು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
