ಕಾರವಾರ:ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಪ್ರತಿಮೆಯನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಯಲಕಪಾಟಿ ಅವರು ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಮಹಾನ್ ಮಾನವತಾವಾದಿ ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿದ್ದು, ಅತಿ ಹೆಚ್ಚು ತಾಲೂಕುಗಳನ್ನು ಹೊಂದಿರುವ ಉತ್ತರ ಕನ್ನಡದ ಜಿಲ್ಲಾ ಕೇಂದ್ರದಲ್ಲೇ ಬಾಬಾಸಾಹೇಬರ ಪ್ರತಿಮೆ ಇಲ್ಲದಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಪ್ರಗತಿಪರ ಸಮುದಾಯಗಳ ಜನರಲ್ಲಿ ತೀವ್ರ ನೋವು ಮತ್ತು ಅಸಮಾಧಾನ ಉಂಟುಮಾಡಿದೆ ಎಂದು ವೇದಿಕೆ ಈ ಸಂದರ್ಭದಲ್ಲಿ ಕಳಕಳಿ ವ್ಯಕ್ತಪಡಿಸಿತು.
ಸಮಾಜ ಕಲ್ಯಾಣ ಇಲಾಖೆಯು ವಿವಿಧ ಅಭಿವೃದ್ಧಿ ಕಾಮಗಾರಿಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ವೇತನ ಹಾಗೂ ಉನ್ನತ ವ್ಯಾಸಂಗ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ವಿನಿಯೋಗಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವುದು ಸರಕಾರಕ್ಕೆ ಅಸಾಧ್ಯವಾದ ಕೆಲಸವೇನಲ್ಲ. ಈಗಾಗಲೇ 2022-2023ನೇ ಸಾಲಿನಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿಯೇ 25 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲು ಸರಕಾರ ಆದೇಶಿಸಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ಆ ಅನುದಾನವು ಇಲ್ಲಿಯವರೆಗೆ ಬಿಡುಗಡೆಯಾಗದೆ ಬಾಕಿ ಉಳಿದಿದೆ ಎಂದು ವೇದಿಕೆಯ ಪದಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ, ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಶೀಘ್ರವಾಗಿ ನಿರ್ಮಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಬೇಕು. ಒಂದು ವೇಳೆ ಸರಕಾರಕ್ಕೆ ತಕ್ಷಣವೇ ಅನುದಾನ ನೀಡಲು ಸಾಧ್ಯವಾಗದಿದ್ದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕೃತ ಸಮಿತಿಯೊಂದನ್ನು ರಚಿಸಿಕೊಡಬೇಕು.
ಹಾಗೆ ಮಾಡಿದಲ್ಲಿ, ವಿವಿಧ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಸಾರ್ವಜನಿಕರಿಂದಲೇ ನೆರವು ಪಡೆದು ಪ್ರತಿಮೆ ನಿರ್ಮಿಸಲು ಸಿದ್ಧರಿದ್ದೇವೆ ಎಂದು ವೇದಿಕೆ ತಿಳಿಸಿದೆ. ಆದ್ದರಿಂದ ಶಾಸಕರು ತಕ್ಷಣವೇ ಮಧ್ಯಪ್ರವೇಶಿಸಿ, ಕಾರವಾರದಲ್ಲಿ ಪ್ರತಿಮೆ ಸ್ಥಾಪನೆಗೆ ಸರಕಾರದಿಂದ ಅಧಿಕೃತ ಅನುಮತಿ ಹಾಗೂ ಆದೇಶ ಹೊರಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಅಕ್ಬರ್ ಇನಾಮದಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
