ಪ್ರಕೃತಿಯ ಮುನಿಸಿಗೆ ಕಡಲತೀರದ ಜನತೆ ಪ್ರತಿವರ್ಷ ಆತಂಕದ ನೆರಳಿನಲ್ಲಿ ದಿನ ದೂಡುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿ ಹಾಗೂ ಮುಂಗಾರಿನ ಆರ್ಭಟಕ್ಕೆ ಸಮುದ್ರದ ಅಲೆಗಳು ರೌದ್ರಾವತಾರ ತಾಳಿವೆ. ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವ ಕಡಲಕೊರೆತದ ತೀವ್ರತೆಗೆ ಕಡಲತೀರದ ಎರಡು ಮನೆಗಳು ಯಾವುದೇ ಕ್ಷಣದಲ್ಲಾದರೂ ನೆಲಸಮವಾಗುವ ಭೀತಿಯನ್ನು ಎದುರಿಸುತ್ತಿವೆ.

ಸಮುದ್ರದ ದೈತ್ಯ ಅಲೆಗಳು ತೀರವನ್ನು ನುಂಗಿ ನೇರವಾಗಿ ಮನೆಗಳ ಅಂಗಳಕ್ಕೇ ಅಪ್ಪಳಿಸುತ್ತಿವೆ. ಹಾರವಾಡದ ನಿವಾಸಿಗಳಾದ ಸತೀಶ ಹರಿಕಂತ್ರ ಮತ್ತು ಸುಮಿತ್ರ ಹರಿಕಂತ್ರ ಅವರಿಗೆ ಸೇರಿದ ಮನೆಗಳೇ ಈ ಅಪಾಯದ ವಲಯಕ್ಕೆ ಸಿಲುಕಿರುವ ದುರ್ದೈವಿ ಆಶ್ರಯ ತಾಣಗಳು. ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿತ ಕುಟುಂಬದ ಸದಸ್ಯರು, ಕಣ್ಣೆದುರೇ ತಮ್ಮ ನೆಚ್ಚಿನ ಸೂರು ಧರಶಾಹಿಯಾಗುವ ಭೀತಿಯಲ್ಲಿ, ಕಣ್ಣೀರು ಹಾಕುತ್ತಲೇ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳತ್ತ ಮುಖ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಬಂದರು ಇಲಾಖೆಯ ಅಧಿಕಾರಿಗಳ ತಂಡ ಜಂಟಿಯಾಗಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯ ಅವಲೋಕನ ನಡೆಸಿದೆ. ಸದ್ಯಕ್ಕೆ ಸಮುದ್ರದ ಅಬ್ಬರದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಆದರೆ, ಹಾರವಾಡ ಭಾಗದಲ್ಲಿ ಕಡಲಕೊರೆತ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವುದು ಕರಾವಳಿ ನಿವಾಸಿಗಳ ನಿದ್ದೆಗೆಡಿಸಿದೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ತಾತ್ಕಾಲಿಕ ಪರಿಹಾರ ನೀಡುವುದನ್ನು ಬಿಟ್ಟು, ತಮ್ಮ ಪ್ರಾಣ ಮತ್ತು ಆಸ್ತಿಯ ರಕ್ಷಣೆಗಾಗಿ ಸರ್ಕಾರ ತಕ್ಷಣವೇ ಶಾಶ್ವತ ಕಡಲ ತಡೆಗೋಡೆ ಸೇರಿದಂತೆ ಬಲಿಷ್ಠ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
