ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮೂಲಸೌಕರ್ಯಗಳ ಕೊರತೆಯಿಂದ ಗ್ರಾಮೀಣ ಜನತೆ ಪರದಾಟ: ಉಗ್ರ ಹೋರಾಟದ ಎಚ್ಚರಿಕೆ

Pakka News Web • 8 ಜುಲೈ 2026,

ಕಾರವಾರ: ಮಳೆಗಾಲ ಆರಂಭವಾಗಿ ತಿಂಗಳಾದರೂ ಕಾರವಾರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನಜೀವನ ದುಸ್ತರವಾಗಿದೆ ಎಂದು ಬಿಜೆಪಿ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ ಆರೋಪಿಸಿದ್ದಾರೆ. ನಿರಂತರ ವಿದ್ಯುತ್ ವ್ಯತ್ಯಯ, ಅವ್ಯವಸ್ಥಿತ ಬಸ್ ಸಂಚಾರ, ಹದಗೆಟ್ಟ ರಸ್ತೆಗಳು ಹಾಗೂ ಚರಂಡಿ ಸಮಸ್ಯೆಯಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಲ್ಲಾಪುರ ಭಾಗದಲ್ಲಿ ದಿನಕ್ಕೆ ಹಲವಾರು ಬಾರಿ ವಿದ್ಯುತ್ ಕಡಿತವಾಗುತ್ತಿದ್ದು, ವಿದ್ಯಾರ್ಥಿಗಳ ಓದು, ವ್ಯಾಪಾರ ವಹಿವಾಟು ಮತ್ತು ದೈನಂದಿನ ಬದುಕು ಅಸ್ತವ್ಯಸ್ತವಾಗಿದೆ. ಕೈಗಾ ಅಣು ವಿದ್ಯುತ್ ಯೋಜನೆ ಹಾಗೂ ಕದ್ರಾ-ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳ ಸಮೀಪದಲ್ಲೇ ಇಂತಹ ಸಮಸ್ಯೆ ಮುಂದುವರಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗಗಳಿಗೆ ಬಸ್‌ಗಳು ನಿಗದಿತ ವೇಳೆಗೆ ಸಂಚರಿಸದ ಕಾರಣ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದೆ ದಿನಕ್ಕೆ ಐದು ಬಾರಿ ಸಂಚರಿಸುತ್ತಿದ್ದ ಬಸ್‌ಗಳು ಈಗ ಎರಡು ಸುತ್ತಿಗೆ ಸೀಮಿತವಾಗಿದ್ದು, ಜನರನ್ನು ಮಿತಿಮೀರಿಸಿ ತುಂಬಿಕೊಂಡೇ ಓಡುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಗ್ರಾಮೀಣ ರಸ್ತೆಗಳು ದೊಡ್ಡ ದೊಡ್ಡ ಗುಂಡಿಗಳಿಂದ ಹದಗೆಟ್ಟಿದ್ದು, ಕೆಸರು ಮತ್ತು ಮಳೆನೀರಿನಿಂದ ಸಂಚಾರವೇ ಕಷ್ಟಕರವಾಗಿದೆ. ಆಂಬ್ಯುಲೆನ್ಸ್, ಶಾಲಾ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಗಿದ್ದು, ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಚರಂಡಿ ಸ್ವಚ್ಛತೆ ಕೊರತೆಯಿಂದ ನೀರು ರಸ್ತೆಯಲ್ಲೇ ನಿಂತು ಸಮಸ್ಯೆ ಹೆಚ್ಚಿಸಿದೆ. ಹಬ್ಬುವಾಡ–ಬಾಂಡಿಶಿಟ್ಟಾ ರಸ್ತೆಯಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗಳ ಬಗ್ಗೆ ಹಲವು ಬಾರಿ ದೂರು ನೀಡಿದರೂ ಶಾಸಕರು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗುನಗಿ ಆರೋಪಿಸಿದ್ದಾರೆ. ಇತ್ತೀಚೆಗೆ ಮಲ್ಲಾಪುರದ ಬೋಳ್ವೆಯಲ್ಲಿ ರಸ್ತೆ ದುರವಸ್ಥೆ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಬೃಹತ್ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250