ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಜೆಇಇ, ಕೆಸಿಇಟಿ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೀಶ್ ನಾಯ್ಕ  ಅಮೋಘ ಸಾಧನೆ

Pakka News Web • 11 ಜುಲೈ 2026,

ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಪ್ರತಿಷ್ಠಿತ ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ್ ಅವರನ್ನು ಅಭಿನಂದಿಸಲು ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಧಾರವಾಡ ಹಾಗೂ ಕಾರವಾರದ ಬಾಲ ಮಂದಿರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.

ಅನೀಶ್ ನಾಯ್ಕ್ ಪಿಯುಸಿಯಲ್ಲಿ ಶೇ.96. ಅಂಕಗಳನ್ನು ಗಳಿಸಿದ್ದು, ಜೆಇಇ ಮೇನ್ಸ್‌ನಲ್ಲಿ ಶೇ.99.56, ಜೆಇಇ ಅಡ್ವಾನ್ಸ್‌ನಲ್ಲಿ ಅಖಿಲ ಭಾರತ 5809ನೇ ರ್ಯಾಂಕ್ ಹಾಗೂ ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ 892ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಅಲ್ಲದೆ, ಎಸ್‌ಒಎಫ್ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ 189ನೇ ಅಖಿಲ ಭಾರತ ರ್ಯಾಂಕ್ ಮತ್ತು ಝೋನಲ್ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿದ್ದು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ನಡೆಸುವ ಪರೀಕ್ಷೆಯ ಮೊದಲ ಹಂತವನ್ನೂ ಯಶಸ್ವಿಯಾಗಿ ತೇರ್ಗಡೆ ಹೊಂದಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ, ಶಾಲಾ ದಿನಗಳಿಂದಲೇ ಅನೀಶ್ ಅವರ ಪರಿಶ್ರಮ, ಶಿಸ್ತು, ಉತ್ತಮ ನಡವಳಿಕೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಅವರನ್ನು ಈ ಮಟ್ಟದ ಸಾಧನೆಗೆ ಕೊಂಡೊಯ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ ಮತ್ತಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಅನೀಶ್ ನಾಯ್ಕ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಒಂದು ದಿನದಲ್ಲಿ ದೊರೆಯುವುದಿಲ್ಲ. ನಿರಂತರ ಪರಿಶ್ರಮ, ಸಮಯದ ಸದ್ಬಳಕೆ, ವಿಷಯದ ಆಳವಾದ ಅರಿವು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಮಾತ್ರ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯ ಎಂದು ತಮ್ಮ ಅನುಭವಗಳನ್ನು ಕಿರಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಪ್ರೇರಣಾದಾಯಕ ಸಂದೇಶ ನೀಡಿದರು.

ತಮ್ಮ ಸಾಧನೆಗೆ ತಂದೆ-ತಾಯಿಯರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಅರ್ಜುನ ಸಂಸ್ಥೆಯ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಅನೀಶ್ ನಾಯ್ಕ್ ಅವರು ಜೀ ಕನ್ನಡ ನ್ಯೂಸ್‌ನ ಉತ್ತರ ಕನ್ನಡ ಜಿಲ್ಲಾ ವರದಿಗಾರ ಕಡತೋಕ ಮಂಜು ಹಾಗೂ ಶಿಕ್ಷಕಿ ಶ್ವೇತಾ ನಾಯ್ಕ ಅವರ ಮಗನಾಗಿದ್ದಾರೆ. ಕಾರ್ಯಕ್ರಮದಲ್ಲಿ ಅರ್ಜುನ ಸಂಸ್ಥೆಯ ನಿರ್ದೇಶಕರು, ಬಾಲ ಮಂದಿರ ಶಾಲೆಯ ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಯ ಪಾಲಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250