ಕಾರವಾರ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಸ್ಥಳೀಯವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮತ್ತು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ಜನಪರ ನಾಯಕತ್ವದಿಂದ ಪ್ರಭಾವಿತರಾಗಿ, ತಾಲೂಕಿನ ಗ್ರಾಮೀಣ ಪ್ರದೇಶದ ನೂರಾರು ಕಾರ್ಯಕರ್ತರು ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.
ಕಾರವಾರ ಗ್ರಾಮೀಣ ಬಿಜೆಪಿ ಮಂಡಲದ ವತಿಯಿಂದ ಕೆರವಡಿ ಪಂಚಾಯತ್ ವ್ಯಾಪ್ತಿಯ ಕಡಿಯೇ ಗ್ರಾಮದ ಸಿದ್ದಿವಿನಾಯಕ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಹೊಸ ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ಎಸ್. ನಾಯ್ಕ್ ಅವರು, ರಾಜಕೀಯ ಪಕ್ಷವೊಂದರಲ್ಲಿ ಕಾರ್ಯಕರ್ತರು ಎಂದರೆ ಕೇವಲ ಸದಸ್ಯರಷ್ಟೇ ಅಲ್ಲ, ಅವರು ದೇಶ ಕಾಯುವ ಸೈನಿಕರಂತೆ ಸದಾ ಸನ್ನದ್ಧರಾಗಿರಬೇಕು. ಸೈನಿಕರು ಹೇಗೆ ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಾರೋ, ಹಾಗೆಯೇ ಪಕ್ಷದ ಕಾರ್ಯಕರ್ತರು ಸಮಾಜದ ಮತ್ತು ದೇಶದ ಹಿತಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿ ನೂತನ ಸದಸ್ಯರಿಗೆ ಶುಭ ಹಾರೈಸಿದರು. ಮುಂದುವರಿದು ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಬಡವರು, ಮಹಿಳೆಯರು ಹಾಗೂ ಎಲ್ಲಾ ವರ್ಗದ ಜನತೆಯನ್ನು ತಲುಪುವಂತಹ ಅನೇಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಕ್ಷ ಸೇರ್ಪಡೆಗೊಂಡವರ ಪರವಾಗಿ ಮಾತನಾಡಿದ ಗಣೇಶ್ ಸಾವಂತ್ ಹಾಗೂ ಕುಮಾರ್ ಸಾನು ಅವರು, ದೇಶವನ್ನು ಯಶಸ್ಸಿನತ್ತ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಸ್ಥಳೀಯವಾಗಿ ಸದಾ ಜನಸಾಮಾನ್ಯರ ಪರವಾಗಿ ನಿಲ್ಲುವ ನಮ್ಮ ನೆಚ್ಚಿನ ನಾಯಕಿ ರೂಪಾಲಿ ನಾಯ್ಕ್ ಅವರ ಆದರ್ಶ ಹಾಗೂ ಕಾರ್ಯತತ್ಪರತೆಯೇ ತಾವು ಬಿಜೆಪಿ ಸೇರಲು ಮುಖ್ಯ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಕೇಶ್ ಬಾಂದೇಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುತ್ತಾ, ಈ ಬೃಹತ್ ಸೇರ್ಪಡೆಗೆ ಕಾರಣಕರ್ತರಾದ ರೂಪಾಲಿ ನಾಯ್ಕ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೀಪಾ ಹೆಗಡೆ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಉದಯ ಪಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಕೇಶ್ ಬಾಂದೇಕರ್ ಪಕ್ಷ ಸೇರ್ಪಡೆಗೊಂಡವರ ಹೆಸರಿನ ಪಟ್ಟಿಯನ್ನು ವಾಚಿಸಿದರು. ಪಕ್ಷ ಸೇರ್ಪಡೆ ಪ್ರಕ್ರಿಯೆಯಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಕೃಷ್ಣ ಜಿ. ನಾಯ್ಕ್ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ವೇದಿಕೆಯ ಮೇಲೆ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಸೂರಜ್ ದೇಸಾಯಿ, ಉದಯ ನಾಯ್ಕ್, ಸ್ಥಳೀಯ ಪ್ರಮುಖರಾದ ಗೋವಿಂದ ಮಿರಾಶಿ, ಯುವಮೋರ್ಚಾ ಅಧ್ಯಕ್ಷ ಸುರೇಂದ್ರ ಗಾಂವ್ಕರ್, ರಾಜೇಶ್ ಗಾಂವ್ಕರ್, ಸತೀಶ್ ತಳೇಕರ್, ಮಂಡಲ ಪದಾಧಿಕಾರಿಗಳಾದ ಅನಿಲ್ ಮಾಜಾಳಿಕರ್, ಹರೀಶ್ ನಾಗೇಕರ್, ಪ್ರಮೀಳಾ ನಾಯ್ಕ, ಬಾಲಚಂದ್ರ ಕಾಮತ್, ಸುಧಾ ನಾಯ್ಕ್, ವರ್ಷಾ ಪಡವಲ್ಕರ್ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಜವಾಬ್ದಾರಿಯುತ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
