ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆ: ಕೇಂದ್ರದ ವಿರುದ್ಧ ಉಗ್ರಪ್ಪ ಅಸಮಾಧಾನ!

Pakka News Web • 13 ಜುಲೈ 2026,

ಕಾರವಾರ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ 2022ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ಶ್ರೀ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಕಾರವಾರ ನಗರ ಜಿಲ್ಲಾ ಪತ್ರಿಕಾಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ರಾಜ್ಯದಲ್ಲಿ ಸುಮಾರು 50 ಲಕ್ಷ ಎಸ್.ಟಿ (ಶೇ.7 ಜನಸಂಖ್ಯೆ, 51 ಜಾತಿಗಳು), 1 ಕೋಟಿ 25 ಲಕ್ಷ ಎಸ್.ಸಿ (ಶೇ.17.1 ಜನಸಂಖ್ಯೆ, 101 ಜಾತಿಗಳು) ಹಾಗೂ ಎಂ.ಆರ್. ನಾಯ್ಕ ವರದಿಯ ಅನ್ವಯ ಒಬಿಸಿ (ಶೇ.40 ಜನಸಂಖ್ಯೆ) ಜನರಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಸುಮಾರು ನಾಲ್ಕುವರೆ ಕೋಟಿಗೂ ಹೆಚ್ಚು ಜನಸಂಖ್ಯೆಯ ಹಿತಾಸಕ್ತಿಗೆ ಸಂಬಂಧಿಸಿದ ಈ ಮೀಸಲಾತಿ ಬಿಕ್ಕಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಿವೆ ಎಂದು ದೂರಿದರು. 

ಸಂವಿಧಾನದ ವಿಧಿಗಳಾದ 340, 341 ಮತ್ತು 342ರ ಅಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಒಬಿಸಿ, ಎಸ್.ಸಿ ಮತ್ತು ಎಸ್.ಟಿ ವರ್ಗಗಳನ್ನು ವರ್ಗೀಕರಿಸಿದ್ದಾರೆ. ಆರಂಭದಲ್ಲಿ ಮೀಸಲಾತಿ ಪ್ರಮಾಣ ಕಡಿಮೆ ಇದ್ದರೂ, 1991ರಲ್ಲಿ ಕೇಂದ್ರದಲ್ಲಿದ್ದ ಚಂದ್ರಶೇಖರ್ ಮತ್ತು ನರಸಿಂಹರಾವ್ ಸರ್ಕಾರಗಳ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ವಂಶಸ್ಥರ ಪರ್ಯಾಯ ಪದಗಳನ್ನು ಸೇರಿಸಿದ ಬಳಿಕ ಎಸ್.ಟಿ ಜನಸಂಖ್ಯೆ ಶೇ. 7ಕ್ಕೆ ಏರಿಕೆಯಾಯಿತು ಎಂದು ಅವರು ಇತಿಹಾಸವನ್ನು ಸ್ಮರಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕು ಎಂಬ ಸಾಂವಿಧಾನಿಕ ಆಶಯದಂತೆ ನಡೆದ ದೀರ್ಘಕಾಲದ ಹೋರಾಟಗಳು ಹಾಗೂ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, 2022ರಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಎಲ್ಲ ಪಕ್ಷಗಳ ಒಮ್ಮತದೊಂದಿಗೆ ‘ಕರ್ನಾಟಕ ಎಸ್.ಸಿ, ಎಸ್.ಟಿ ಮೀಸಲಾತಿ ಕಾಯ್ದೆ 2022’ ಅನ್ನು ಜಾರಿಗೆ ತಂದಿತ್ತು. ಇದರ ಅನ್ವಯ ಎಸ್.ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಎಸ್.ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಇಂದಿರಾ ಸಹಾನಿ ತೀರ್ಪಿನ ಹಿನ್ನೆಲೆಯಲ್ಲಿ ಈ ಕಾನೂನಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಲು ಇದನ್ನು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸುವುದು ಅನಿವಾರ್ಯವಾಗಿತ್ತು.

ಈ ನಿಟ್ಟಿನಲ್ಲಿ 2023ರ ಮಾರ್ಚ್ 23ರಂದು ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ತದನಂತರ ಕಳೆದ ಡಿಸೆಂಬರ್ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲದೆ, 2026ರ ಜನವರಿಯಲ್ಲಿ ಎಸ್.ಟಿ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಇತ್ತೀಚೆಗೆ ಏಪ್ರಿಲ್ 16ರಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಇಷ್ಟೆಲ್ಲಾ ಪ್ರಯತ್ನಗಳಾಗಿದ್ದರೂ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈ ಪ್ರಸ್ತಾವನೆಯನ್ನು ಅಂಗೀಕರಿಸದೇ, ತಿರಸ್ಕರಿಸದೇ ಸಂಪೂರ್ಣ ಮೌನ ವಹಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಲಾಯಿತು. ತಮಿಳುನಾಡಿನಲ್ಲಿರುವ ಶೇ. 69ರಷ್ಟು ಮೀಸಲಾತಿಯನ್ನು 9ನೇ ಶೆಡ್ಯೂಲ್ಗೆ ಸೇರಿಸಿ ರಕ್ಷಣೆ ನೀಡಿರುವ ಮಾದರಿಯೇ ಇಲ್ಲೂ ಅನುಸರಿಸಬೇಕಿತ್ತು ಎಂದರು. 

ಕೇಂದ್ರ ಸರ್ಕಾರದ ಈ ನಿಷ್ಕ್ರಿಯತೆಯಿಂದಾಗಿ ಸಾಮಾಜಿಕ ನ್ಯಾಯದ ವಿರೋಧಿಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದರ ಪರಿಣಾಮವಾಗಿ ಪ್ರಸ್ತುತ ಎಸ್.ಸಿ ಮೀಸಲಾತಿ ಶೇ. 17ರಿಂದ ಮತ್ತೆ 15ಕ್ಕೆ ಹಾಗೂ ಎಸ್.ಟಿ ಮೀಸಲಾತಿ ಶೇ. 7ರಿಂದ 3ಕ್ಕೆ ಕುಸಿದಿದೆ. ಇತ್ತೀಚಿನ ಅಬಕಾರಿ ಇಲಾಖೆಯ ಸಿಎಲ್-1, ಸಿಎಲ್-2 ಪರವಾನಗಿಗಳ ಅಧಿಸೂಚನೆಯಲ್ಲಿಯೂ ಹಳೆಯ ಮೀಸಲಾತಿ ಪ್ರಮಾಣವನ್ನೇ ಮುಂದುವರಿಸಿರುವುದು ಶೋಷಿತ ವರ್ಗದವರ ಹಕ್ಕನ್ನು ಕಸಿದುಕೊಂಡಂತಾಗಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿಯೇ ಅಸಾಧಾರಣ ಸಂದರ್ಭಗಳಲ್ಲಿ ಶೇ. 50ರ ಮಿತಿಯನ್ನು ಸಡಿಲಿಸಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರವು ಮೇಲ್ವರ್ಗದ ಆರ್ಥಿಕ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಬಹುದಾದರೆ, ಇಷ್ಟು ದೊಡ್ಡ ಜನಸಂಖ್ಯೆ ಹೊಂದಿರುವ ಹಿಂದುಳಿದ ಮತ್ತು ಶೋಷಿತ ವರ್ಗಗಳ ಹಿತರಕ್ಷಣೆಗೆ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. 

ಕುರುಬ, ಬೆಸ್ತಾ, ಗೊಲ್ಲ ಸೇರಿದಂತೆ ಯಾವುದೇ ಸಮುದಾಯಗಳನ್ನು ಸಂವಿಧಾನದ ನಿಯಮಾವಳಿಗಳ ಪ್ರಕಾರ ಕುಲಶಾಸ್ತ್ರ ಅಧ್ಯಯನ ನಡೆಸಿ ಎಸ್.ಸಿ ಅಥವಾ ಎಸ್.ಟಿ ಪಟ್ಟಿಗೆ ಸೇರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಹೊಸ ಸಮುದಾಯಗಳನ್ನು ಸೇರಿಸುವಾಗ ಹಾಲಿ ಇರುವ ಶೇ. 15 ಮತ್ತು ಶೇ. 3ರ ಕೋಟಾವನ್ನು ಕಬಳಿಸಬಾರದು; ಬದಲಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸ್ಪಷ್ಟಪಡಿಸಿದರು. ಶೋಷಿತ ವರ್ಗಗಳ ಮತಗಳನ್ನು ಪಡೆದು ಆಯ್ಕೆಯಾಗಿರುವ ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಅನ್ಯಾಯದ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ ಎಂದು ತರಾಟೆಗೆ ತೆಗೆದುಕೊಂಡರು. 

ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ ಅವರು, ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಹಿರಿಯ ವಕೀಲ ರವಿವರ್ಮ ಕುಮಾರ್ ಅವರನ್ನು ನೇಮಕ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಪ್ರಧಾನಮಂತ್ರಿಯವರು ನಾವೆಲ್ಲಾ ಹಿಂದೂಗಳು ಒಂದು ಎಂದು ಹೇಳುವುದಾದರೆ, ತಕ್ಷಣವೇ ಈ ಕಾಯ್ದೆಯನ್ನು 9ನೇ ಶೆಡ್ಯೂಲ್ಗೆ ಸೇರಿಸಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಶೋಷಿತ ಸಮುದಾಯಗಳ ಹಿತ ಕಾಯಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಬಲವಾಗಿ ಆಗ್ರಹಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ನರಸಿಂಹಯ್ಯ ಕಾರ್ಯಾಧ್ಯಕ್ಷ, ಪ್ರಕಾಶ ದೇಸಾಯಿ ಹಿರಿಯ ಮುಖಂಡರು ಗೋಕಾಕ, ಹನುಮಂತರಾಯಪ್ಪ ಸದಸ್ಯರು ಕೋಲಾರ, ಹನುಮಂತಪ್ಪ ಕೋಲಾರ, ಜಿಲ್ಲಾ ಪ.ಜಾತಿ/ಪ.ಪಂ ನೌಕರರ ಜಿಲ್ಲಾ ಅಧ್ಯಕ್ಷರಾದ ಜಿ.ಡಿ.ಮನೋಜ್ ಕರ್ನಾಟಕ ರಾಜ್ಯ ಪ.ಪಂಗಡ ನೌಕರರ ಸಂಘ ಕಾರವಾರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ ಬಿಷ್ಟಣ್ಣನವರ, ನೇವಲ್ ಬೇಸ್ ಎಸ್ ಸಿ ಎಸ್ ಟಿ ಎಂಪಲಾಯ್ ಅಸೋಸಿಯೇಷನ್ ಕಾರ್ಯದರ್ಶಿ ಜಗದೇಶ ಓಲೇಕಾರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗರಾಜ ತಳವಾರ ಸಮಾಜದ ಮುಖಂಡರಾದ ಭೀಮಶಿ ವಾಲ್ಮೀಕಿ,ರಮೇಶ ಇಂಗಳಕಿ ಮುಂತಾದವರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250