ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಅಕ್ರಮ ವಲಸಿಗರಿಗೆ ನಿವಾಸಿ ಪ್ರಮಾಣಪತ್ರ ಬೇಡ: ಬಿಜೆಪಿ ಆಕ್ರೋಶ!

Pakka News Web • 13 ಜುಲೈ 2026,

ಕಾರವಾರ:ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಹೊರಟಿರುವುದನ್ನು ಬಲವಾಗಿ ಖಂಡಿಸಿದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಜನರನ್ನು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಈ ಕುತಂತ್ರ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಆರೋಪಿಸಿದರು.

ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಂದಾಯ ನಿರೀಕ್ಷಕರ ಮೂಲಕ ಇಂತಹ ಪ್ರಮಾಣಪತ್ರ ನೀಡಲು ಹೊರಟಿರುವುದು ಸಂವಿಧಾನ ಬಾಹಿರವಾಗಿದ್ದು, ಇದು ದೇಶದ ಭದ್ರತೆಗೆ ದೊಡ್ಡ ಆತಂಕವನ್ನು ಸೃಷ್ಟಿಸಲಿದೆ. ಇದರಿಂದ ರಾಜ್ಯದಲ್ಲಿ ಉದ್ಯೋಗ, ಪಡಿತರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಸಿಗಬೇಕಾದ ಸೌಲಭ್ಯಗಳು ವಂಚಿತವಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳ ತಂಡವು ಈ ಅಧಿಸೂಚನೆಯನ್ನು ತಕ್ಷಣವೇ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಮತ್ತು ಕೇಂದ್ರ ಗೃಹ ಇಲಾಖೆಗೆ ಆಗ್ರಹಪೂರ್ವಕ ಮನವಿ ಸಲ್ಲಿಸಲು ನಿರ್ಧರಿಸಿದೆ.

ಉಡುಪಿ ಶಾಸಕ ಯಶಪಾಲ್ ಸುವರ್ಣ ರಾಜ್ಯ ಸರ್ಕಾರದ ಜಾತಿ ಜನಗಣತಿ ಪ್ರಕ್ರಿಯೆಯನ್ನು ಕಟುವಾಗಿ ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಮುಖವಾಡ ಧರಿಸಿ ಅಧಿಕಾರಕ್ಕೆ ಬಂದರೂ, ಶೇಕಡಾ 35 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗದ ಜನರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಜನರ ತೆರಿಗೆಯ ಸುಮಾರು 160 ಕೋಟಿಗೂ ಅಧಿಕ ರೂಪಾಯಿ ವೆಚ್ಚ ಮಾಡಿ ಸಿದ್ಧಪಡಿಸಲಾದ ಕಾಂತರಾಜ್ ವರದಿಯ ಸತ್ಯಾಂಶವನ್ನು ಜಾರಿಗೆ ತರದೆ ಮರೆಮಾಚಲಾಗುತ್ತಿದೆ ಮತ್ತು ಹಾಲಿ ಮುಖ್ಯಮಂತ್ರಿಗಳು ಅದರಲ್ಲಿ ತಿದ್ದುಪಡಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಯಶಪಾಲ್ ಸುವರ್ಣ ದೂರಿದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಮೇಲಿನ ಹೊಟ್ಟೆಕಿಚ್ಚಿನಿಂದಾಗಿ ಕೇವಲ ಹಣ ಲೂಟಿ ಮಾಡಲು ಜಾತಿ ಜನಗಣತಿಯ ನಾಟಕವಾಡಿದೆ ಎಂದು ಆರೋಪಿಸಿದರು. ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿ ಮನೆಗಳಿಗೆ ಕೇವಲ ಸ್ಟಿಕ್ಕರ್ ಹಚ್ಚಲಾಗಿದೆಯೇ ಹೊರತು ಯಾವುದೇ ಸರಿಯಾದ ಸರ್ವೆ ನಡೆದಿಲ್ಲ. ಇಷ್ಟು ದೊಡ್ಡ ಮೊತ್ತದ ಹಣ ವ್ಯಯಿಸಿದರೂ ಈ ವರದಿಯ ಫಲಿತಾಂಶವೇನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸರ್ಕಾರವು ಹಣವನ್ನು ನುಂಗಿ ನೀರು ಕುಡಿದಿದೆಯೇ ಹೊರತು ಯಾವುದೇ ರಿಸಲ್ಟ್ ಬಂದಿಲ್ಲ. ಹಾಗಾಗಿ ಸರ್ಕಾರ ತಕ್ಷಣವೇ ಇದರ ಲೆಕ್ಕಾಚಾರವನ್ನು ಜನರ ಮುಂದಿಡಬೇಕು ಎಂದು ಅವರು ಧಿಕ್ಕಾರ ಕೂಗಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳಾದ ಶಿವಾಜಿ ನರಸಾನಿ, ಈಶ್ವರ ನಾಯ್ಕ, ಮನೋಜ ಭಟ್, ಗಣಪತಿ ಕರಂಜೆಕರ್, ಅನಿಲ ಮುತ್ನಾಳ, ಸುಭಾಷ ಗುನಗಿ, ರಾಜೇಂದ್ರ ನಾಯ್ಕ ಹಾಗೂ ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250