ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಶುಭ ಸುದ್ದಿ: ಜಲಸಾಹಸ ಕ್ರೀಡೆಗೆ ಇದೆ ಅವಕಾಶ  

Pakka News Web • 13 ಜುಲೈ 2026,

ಕಾರವಾರ:ಜಿಲ್ಲೆಯ ಪ್ರಮುಖ ಕಡಲತೀರಗಳಾದ ನದಿಭಾಗ್, ಕಾಗಾಲ್ (ಬಾಡ) ಕುಮಟಾ (ಹೆಡ್ ಬಂದರು) ಧಾರೇಶ್ವರ (ರಾಮನಗಿಂಡಿ) ಅಪ್ಸರಕೊಂಡ, ಕಾಸರಗೋಡು ಹಾಗೂ ಹೊನ್ನಾವರ ಅರೆಸಾಮಿ ಕೆರೆ ಪ್ರದೇಶಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು ಜೇತನಾ ಸರ್ವೇ ವರದಿಯ ತಿಳಿಸಿದ್ದು, ಈ ಪ್ರದೇಶಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೇತನಾ ಸರ್ವೇ ವರದಿಯು ಅನುಮತಿ ನೀಡಿರುವ ಪ್ರದೇಶಗಳಲ್ಲಿ, ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಆ ಪ್ರದೇಶಗಳಿಗೆ ಸೂಕ್ತವಾಗುವ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವಂತೆ ತಿಳಿಸಿದ ಅವರು, ಕಾಸರಕೋಡು ಕಡಲ ತೀರದಲ್ಲಿ ಶಬ್ದಮಾಲಿನ್ಯವಿಲ್ಲದ ಇವಿ/ಸೋಲಾರ್ ಬಳಸುವ ಜಲಸಾಹಸ ಚಟುವಟಿಕೆಗಳನ್ನು ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದರು.

ಕಾಸರಕೋಡು ಕಡಲತೀರದಲ್ಲಿ ಸುಸಜ್ಜಿತವಾದ ವಾಚ್ ಟವರ್ ನಿರ್ಮಿಸುವಂತೆ ತಿಳಿಸಿದ ಅವರು, ಕಡಲತೀರದ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಇಕೋ ಪಾರ್ಕ್ ನಿರ್ವಹಣೆ ಮತ್ತು ಆದಾಯ ಹಂಚಿಕೆ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.

ಗೋಕರ್ಣ ಮತ್ತು ಮುರುಡೇಶ್ವರದಲ್ಲಿ ಪ್ರಸ್ತುತ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವವರು ಪ್ರವಾಸಿಗರ ಆಕರ್ಷಣೆಗೆ ಹೆಚ್ಚುವರಿ ಚಟುವಟಿಕೆಗಳನ್ನು ನಡೆಸಲು ಅನುಮತಿ ಕೋರಿರುವ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಯಿಂದ ಅಗತ್ಯ ನಿರ್ದೇಶನ ಪಡೆದು ಕ್ರಮ ಕೈಗೊಳ್ಳುವಂತೆ ಮತ್ತು ಕಾರವಾರ ಕಡಲತೀರದಲ್ಲಿನ ಮಕ್ಕಳ ಉದ್ಯಾನವನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಮತ್ತಿತರರು ಇದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250