ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಂಗಳಮುಖಿಯರ ಗೌರವಕ್ಕೆ ಧಕ್ಕೆ: ಅಂತರಂಗದ ಎಚ್ಚರಿಕೆ!

Pakka News Web • 14 ಜುಲೈ 2026,

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಗೌರವಯುತ ಜೀವನ ನಡೆಸುತ್ತಿರುವ ಸ್ಥಳೀಯ ಮಂಗಳಮುಖಿಯರ ನೆಮ್ಮದಿಗೆ ಈಗ ಹೊರಗಿನವರಿಂದ ಭಂಗ ಬಂದೊದಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಲಗ್ಗೆ ಇಡುತ್ತಿರುವ ಕೆಲವರು, ಮಂಗಳಮುಖಿಯರ ವೇಷ ಧರಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದಲ್ಲದೆ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದ್ದಾರೆ. ಇಂತಹ ನಕಲಿ ಹಾಗೂ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲೆಯ ಅಂತರಂಗ ಸಮುದಾಯ ಆಧಾರಿತ ಸಂಸ್ಥೆಯ ಪದಾಧಿಕಾರಿಗಳು ಈಗ ಅಧಿಕಾರಿಗಳ ಕದ ತಟ್ಟಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆಗೆ ಸಂಸ್ಥೆಯ ನಿಯೋಗವು ತಮಗಾಗುತ್ತಿರುವ ಅನ್ಯಾಯವನ್ನು ವಿವರಿಸಿ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿತು. ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸ್ಥೆಯ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ಚೌಕಟ್ಟಿನೊಳಗೆ, ಸಮಾಜದೊಂದಿಗೆ ಹೊಂದಿಕೊಂಡು ನಾವು ಅತ್ಯಂತ ವ್ಯವಸ್ಥಿತ ಹಾಗೂ ಗೌರವಯುತ ಜೀವನ ನಡೆಸುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಬರುತ್ತಿರುವ ಹೊರಗಿನ ಕೆಲವು ಮಂಗಳಮುಖಿಯರು ಹಾಗೂ ಅವರ ವೇಷಧಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ರಾದ್ಧಾಂತ ಸೃಷ್ಟಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಅನಾವಶ್ಯಕವಾಗಿ ಗಲಾಟೆ ಮಾಡುವುದು, ಸಭ್ಯತೆ ಮೀರಿ ವರ್ತಿಸುವುದು ಹೆಚ್ಚಾಗುತ್ತಿದೆ. ಇವರ ಈ ಬೇಜವಾಬ್ದಾರಿ ವರ್ತನೆಯಿಂದಾಗಿ, ವರ್ಷಗಳಿಂದ ನಾವು ಗಳಿಸಿಕೊಂಡಿದ್ದ ಒಳ್ಳೆಯ ಹೆಸರಿಗೆ ಧಕ್ಕೆ ಬರುತ್ತಿದೆ. ಸಮಾಜ ಇಡೀ ಸಮುದಾಯವನ್ನು ತಪ್ಪಾಗಿ ನೋಡುವಂತಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಈಗಾಗಲೇ ಈ ಅತಿರೇಕದ ವರ್ತನೆಗಳ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲೂ ಸಂಸ್ಥೆಯ ವತಿಯಿಂದ ದೂರು ದಾಖಲಿಸಲಾಗಿದೆ. ಸ್ಥಳೀಯ ಸಮುದಾಯದ ಘನತೆಯನ್ನು ಕಾಪಾಡಲು ಮತ್ತು ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಿ, ನೈಜ ಸ್ಥಳೀಯ ಮಂಗಳಮುಖಿಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಂತರಂಗ ಸಂಸ್ಥೆಯು ಪ್ರಶಾಸನವನ್ನು ಒತ್ತಾಯಿಸಿದೆ.

ಈ ಮಹತ್ವದ ನಿಯೋಗದಲ್ಲಿ ಅಂತರಂಗ ಸಮುದಾಯ ಆಧಾರಿತ ಸಂಸ್ಥೆಯ ಪ್ರಮುಖ ಸದಸ್ಯರಾದ ಅಂಕೋಲಾದ ಪಿಂಕಿ, ಕಾರವಾರದ ವೈಷ್ಣವಿ, ಹೊನ್ನಾವರದ ರೋಷನಿ ಹಾಗೂ ಸುಹಾನಾ ಮತ್ತು ಹಳಿಯಾಳದ ರಾಣಿ ಉಪಸ್ಥಿತರಿದ್ದು, ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಿನ ಧ್ವನಿ ಎತ್ತಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250