ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಬಿಡಾಡಿ ದನಗಳ ಹಾವಳಿ ತಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದಲಿತ ರಕ್ಷಣಾ ವೇದಿಕೆ ಮನವಿ

Pakka News Web • 14 ಜುಲೈ 2026,

ಕಾರವಾರ:ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ, ಪ್ರಗತಿಪರ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಲಿಷಾ ಯಲಕಪಾಟಿ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಕಾರವಾರ ನಗರದ ಪ್ರಮುಖ ರಸ್ತೆಗಳು, ಪ್ರಮುಖ ವೃತ್ತಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಬಿಡಾಡಿ ದನಗಳ ಕಾಟ ವಿಪರೀತವಾಗಿದೆ. ರಸ್ತೆಯ ಮಧ್ಯದಲ್ಲೇ ಗುಂಪಾಗಿ ನಿಲ್ಲುವ ಮತ್ತು ಮಲಗುವ ಜಾನುವಾರುಗಳಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಮುಖ್ಯವಾಗಿ ರಾತ್ರಿ ವೇಳೆ ಮತ್ತು ಮಳೆಗಾಲದಲ್ಲಿ ರಸ್ತೆಯಲ್ಲಿರುವ ದನಗಳು ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಗಂಭೀರವಾಗಿ ಗಾಯಗೊಳ್ಳುತ್ತಿದ್ದು, ಪ್ರಾಣಹಾನಿಯ ಭೀತಿಯೂ ಎದುರಾಗಿದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಅಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ಮತ್ತು ಪಾದಚಾರಿಗಳು ರಸ್ತೆಯಲ್ಲಿ ಮುಕ್ತವಾಗಿ ಓಡಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ತೊಟ್ಟಿಗಳ ಬಳಿ ಜಮಾಯಿಸುವ ಈ ಜಾನುವಾರುಗಳು ತ್ಯಾಜ್ಯವನ್ನು ರಸ್ತೆಯುದ್ದಕ್ಕೂ ಚೆಲ್ಲಿ ನಗರದ ನೈರ್ಮಲ್ಯವನ್ನು ಹಾಳುಮಾಡುತ್ತಿವೆ. ಜಾನುವಾರುಗಳು ತಮ್ಮೊಳಗೆ ಕಾದಾಡುವಾಗ ಹತ್ತಿರದಲ್ಲಿ ಓಡಾಡುವ ಸಾರ್ವಜನಿಕರ ಮೇಲೆ ಎರಗಿ ಗಾಯಗೊಳಿಸಿದ ಅಪಾಯಕಾರಿ ಘಟನೆಗಳೂ ಸಹ ನಡೆದಿವೆ ಎಂದು ವೇದಿಕೆ ಪ್ರಮುಖರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ಗಂಭೀರ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ತುರ್ತಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವ ವೇದಿಕೆಯು, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ತಕ್ಷಣವೇ ಆದೇಶ ನೀಡಿ ಬಿಡಾಡಿ ದನಗಳನ್ನು ಸೆರೆಹಿಡಿದು ಸಮೀಪದ ಗೋಶಾಲೆಗಳಿಗೆ ಸ್ಥಳಾಂತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದೆ. ಅದರೊಂದಿಗೆ, ಜವಾಬ್ದಾರಿಯಿಲ್ಲದೆ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುವ ಮಾಲೀಕರನ್ನು ಗುರುತಿಸಿ, ಅವರ ವಿರುದ್ಧ ಭಾರಿ ದಂಡ ವಿಧಿಸುವಂತಹ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಅಕ್ಬರ್ ಇನಾಮದಾರ್, ನಾಗರಾಜ ದೊಡ್ಡಮನಿ, ಈಶ್ವರ್ ಕೆ., ರಾಮಾಕಾಂತ್ ಗುನಗಿ ಸೇರಿದಂತೆ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250