ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಬಿಜೆಪಿ ನಾಯಕರ ಸುಳ್ಳಿನ ಸರಮಾಲೆಗೆ ಕಾಂಗ್ರೆಸ್ ತಕ್ಕ ತಿರುಗೇಟು: ಸುರಜ್ ಜಿ. ನಾಯ್ಕ ವಾಗ್ದಾಳಿ

Pakka News Web • 14 ಜುಲೈ 2026,

ಕಾರವಾರದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಪ್ರತಿಯೊಂದು ಹೇಳಿಕೆಯೂ ಸುಳ್ಳು, ದ್ವೇಷ ಹಾಗೂ ಜನರನ್ನು ದಾರಿ ತಪ್ಪಿಸುವ ರಾಜಕಾರಣದ ಮತ್ತೊಂದು ಉದಾಹರಣೆಯಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಸಾಮಾಜಿಕ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ರಾಷ್ಟ್ರೀಯ ಸಂಯೋಜಕರಾದ ಸುರಜ್ ಜಿ. ನಾಯ್ಕ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು ಬಿಜೆಪಿಯ ದಿನನಿತ್ಯದ ಕೆಲಸವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ಆರೋಪಗಳಿಗೆ ಪ್ರತ್ಯೇಕವಾಗಿ ಉತ್ತರಿಸಿದ ಅವರು, “ಶಾಶ್ವತ ನಿವಾಸಿ ಪ್ರಮಾಣಪತ್ರ ದೇಶದ ಭದ್ರತೆಗೆ ಅಪಾಯ” ಎಂದಿದ್ದ ಎನ್.ಎಸ್. ಹೆಗಡೆ ಕರ್ಕಿ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಜನರನ್ನು ಹೆದರಿಸುವ ರಾಜಕೀಯ ಎಂದು ಕರೆದಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ದೇಶದ ಭದ್ರತೆಯ ಹೊಣೆಗಾರಿಕೆ ಹೊಂದಿದ್ದು, ಅಕ್ರಮ ವಲಸಿಗರನ್ನು ತಡೆಯುವುದು ಕೇಂದ್ರ ಗೃಹ ಸಚಿವಾಲಯದ ಕರ್ತವ್ಯವಾಗಿದೆ. ತನ್ನದೇ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗಿರುವುದನ್ನು ಒಪ್ಪಿಕೊಳ್ಳುವ ಬದಲು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಜೆಪಿಯ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಬಿಜೆಪಿ ನಾಯಕರು ಪ್ರತಿಯೊಂದು ವಿಷಯದಲ್ಲೂ ಬಾಂಗ್ಲಾದೇಶ, ಪಾಕಿಸ್ತಾನ, ಧರ್ಮ ಮತ್ತು ಭಯದ ರಾಜಕಾರಣವನ್ನೇ ಮಾಡುವುದನ್ನು ಬಿಟ್ಟು, ಕರ್ನಾಟಕದ ಜನರಿಗೆ ಉದ್ಯೋಗ, ರೈತರು, ಬೆಲೆ ಏರಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಉತ್ತರ ಕೊಡುವ ಧೈರ್ಯ ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಮುಸ್ಲಿಂ ಮತದಾರರನ್ನು ಹೆಚ್ಚಿಸಲು ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ಹರಿಹಾಯ್ದ ಸುರಜ್ ಜಿ. ನಾಯ್ಕ್, ಇಂತಹ ಆರೋಪಗಳಿಗೆ ಶಾಸಕರಲ್ಲಿ ಯಾವುದೇ ಸಾಕ್ಷ್ಯವಿಲ್ಲ. ಇದು ಕೇವಲ ಒಂದು ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುವ ರಾಜಕೀಯ ಭಾಷಣವಾಗಿದೆ. ಭಾರತದ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಅದರ ಮೇಲೆಯೇ ನೇರ ಅನುಮಾನ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವಾಗಿದೆ. ಪ್ರತಿ ಚುನಾವಣೆಯಲ್ಲೂ ಧರ್ಮದ ಹೆಸರಿನಲ್ಲಿ ಮತ ಕೇಳುವ ಬಿಜೆಪಿಗೆ ಈಗ ಹಠಾತ್ ಆಗಿ ಮತದಾರರ ಪಟ್ಟಿಯ ನೆನಪು ಬಂದಿರುವುದು ಹಾಸ್ಯಾಸ್ಪದ ಸಂಗತಿ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಬಿಸಿ ವಿರೋಧಿ ಎಂದು ಕರೆದಿದ್ದ ಯಶ್‌ಪಾಲ್ ಸುವರ್ಣ ಅವರಿಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರು, ದೇಶದಲ್ಲಿ ಮಂಡಲ್ ಆಯೋಗವನ್ನು ಜಾರಿಗೆ ತಂದು, ಒಬಿಸಿ ಮೀಸಲಾತಿಗಾಗಿ ನಿರಂತರವಾಗಿ ಹೋರಾಡಿ ಸಾಮಾಜಿಕ ನ್ಯಾಯದ ಪರ ನಿಂತಿರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಒಬಿಸಿ ಸಮುದಾಯದ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಇಷ್ಟೊಂದು ಕಾಳಜಿ ಇದ್ದರೆ ಕೇಂದ್ರ ಸರ್ಕಾರದಲ್ಲಿ ಜಾತಿ ಜನಗಣತಿಯನ್ನು ಏಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಒಬಿಸಿ ಪ್ರಶ್ನೆ ಬಂದಾಗ ಮೌನ ವಹಿಸುವ ಬಿಜೆಪಿ, ಚುನಾವಣೆ ಬಂದಾಗ ಮಾತ್ರ ಒಬಿಸಿ ಪ್ರೀತಿ ನಾಟಕವಾಡುತ್ತದೆ ಎಂದು ಟೀಕಿಸಿದರು.  

ಪ್ರಿಯಾಂಕ್ ಖರ್ಗೆ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರ ಬಳಿ ಶಿಕ್ಷಣ ಕಲಿಯಲಿ ಎಂದು ವ್ಯಂಗ್ಯ ಮಾಡಿದ್ದ ಯಶ್‌ಪಾಲ್ ಸುವರ್ಣ ಅವರಿಗೆ ಉತ್ತರಿಸಿದ ಸುರಜ್ ನಾಯ್ಕ್, ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಅಡಿಯಲ್ಲಿ ನಡೆಯುತ್ತದೆಯೇ ಹೊರತು ಯಾವುದೇ ಸಂಘಟನೆಯ ಸಿದ್ಧಾಂತದ ಅಡಿಯಲ್ಲಿ ಅಲ್ಲ ಎಂಬುದನ್ನು ಮೊದಲು ಅವರು ಅರಿತುಕೊಳ್ಳಬೇಕು. ಆರ್.ಎಸ್.ಎಸ್. ಎಂದಿಗೂ ಶಿಕ್ಷಣದ ಮಾನದಂಡವಲ್ಲ. ದೇಶದ ಶಿಕ್ಷಣ ವ್ಯವಸ್ಥೆಗೆ ದಿಕ್ಕು ತೋರಿಸುವುದು ಸಂವಿಧಾನ, ವೈಜ್ಞಾನಿಕ ಮನೋಭಾವ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳೇ ಆಗಿವೆ. ಬಿಜೆಪಿ ನಾಯಕರು ಪ್ರತಿಯೊಂದು ವಿಷಯದಲ್ಲೂ ಆರ್‌ಎಸ್‌ಎಸ್‌ ಅನ್ನು ಮಾದರಿಯಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ, ಆದರೆ ಭಾರತವು ಯಾವುದೇ ಒಂದು ಸಂಘಟನೆಯಿಂದ ನಡೆಯುವ ದೇಶವಲ್ಲ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಕಾರ ನಡೆಯುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಯಾವುದೇ ಸಂಘಟನೆಯನ್ನು ದೇಶಕ್ಕಿಂತ ದೊಡ್ಡದಾಗಿ ತೋರಿಸುವ ಮನೋಭಾವವೇ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ನಾಯಕರು ಪ್ರತಿದಿನ ಕಾಂಗ್ರೆಸ್ ವಿರುದ್ಧ ಸುಳ್ಳಿನ ಸುದ್ದಿಗೋಷ್ಠಿ ನಡೆಸುವುದನ್ನು ಬಿಟ್ಟು, ದೇಶದಲ್ಲಿ ತಲೆದೂರಿರುವ ಬೆಲೆ ಏರಿಕೆ, ನಿರುದ್ಯೋಗ, ರೈತರ ಆತ್ಮಹತ್ಯೆ, ಆರ್ಥಿಕ ಅಸಮಾನತೆ ಮತ್ತು ಸಾಮಾನ್ಯ ಜನರ ಸಂಕಷ್ಟಗಳ ಬಗ್ಗೆ ಮಾತನಾಡಲಿ ಎಂದು ಸುರಜ್ ಜಿ. ನಾಯ್ಕ್ ಆಗ್ರಹಿಸಿದ್ದಾರೆ. ಸುಳ್ಳು ಪ್ರಚಾರದಿಂದ ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ.

 ಕರ್ನಾಟಕದ ಪ್ರಜ್ಞಾವಂತ ಜನರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ವಿಭಜನೆಯ ರಾಜಕಾರಣವನ್ನು ಖಂಡಿತವಾಗಿಯೂ ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆಯ ಪರವಾಗಿ ತನ್ನ ಹೋರಾಟವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250