ಕಾರವಾರ: ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಠಿಣ ನೀತಿಗಳಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚುವ ಭೀತಿ ಎದುರಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಶೈಕ್ಷಣಿಕ ಜಿಲ್ಲೆ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಹಿಂದೂ ಹೈಸ್ಕೂಲ್‌ನಿಂದ ಆರಂಭವಾದ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ 20 ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅನುದಾನಿತ ಸಂಸ್ಥೆಗಳು ಇಂದು ಸರ್ಕಾರದ ನಿರ್ಲಕ್ಷ್ಯದಿಂದ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಖಂಡನೀಯವಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಈ ಹೋರಾಟ ಅನಿವಾರ್ಯವಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿತು.

ಪ್ರತಿಭಟನಾಕಾರರು ಮುಖ್ಯವಾಗಿ ನೇಮಕಾತಿ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಒತ್ತಾಯಿಸಿದರು. 2015ರ ನಂತರ ಖಾಲಿಯಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಅಲ್ಲಿಯವರೆಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ಗಡಿ ಮತ್ತು ಕರಾವಳಿ ಭಾಗಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು 1:15 ಕ್ಕೆ ಇಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಇದರೊಂದಿಗೆ, ಹಳೆ ಪಿಂಚಣಿ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸಿಗುವ ಎಲ್ಲಾ ವೇತನ ಹಾಗೂ ಪಿಂಚಣಿ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರಿಗೂ ಒಂದೇ ಆದೇಶದ ಮೂಲಕ ವಿಸ್ತರಿಸಬೇಕು. 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ವೇತನಾನುದಾನ ಮಂಜೂರು ಮಾಡಬೇಕು ಮತ್ತು ಉತ್ತಮ ಫಲಿತಾಂಶ ತಂದ ಶಾಲೆಗಳಿಗೆ ಗೌರವ ಸಂಭಾವನೆ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸೌಲಭ್ಯಗಳ ತಾರತಮ್ಯವನ್ನು ತೊಡೆದುಹಾಕಲು ಆಗ್ರಹಿಸಿದ ಸಂಘವು, ಸರ್ಕಾರಿ ಶಾಲೆಗಳಂತೆ ಅನುದಾನಿತ ಶಾಲೆಗಳಿಗೂ ಉಚಿತ ಸೌಲಭ್ಯಗಳು, ಸ್ಯಾಟ್ಸ್ ಶುಲ್ಕ ಹಾಗೂ ಶಾಲಾ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ. ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಹೊಸ ಕೆಪಿಎಸ್ ಶಾಲೆಗಳನ್ನು ತೆರೆಯುವಾಗ ಕನಿಷ್ಠ 3 ಕಿ.ಮೀ ವ್ಯಾಪ್ತಿಯಲ್ಲಿ ಅನುದಾನಿತ ಶಾಲೆಗಳಿಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಮುಖ್ಯವಾಗಿ, ಶಿಕ್ಷಕರನ್ನು ಅಕ್ಷರದಾಸೋಹ, ಕ್ಷೀರಭಾಗ್ಯದಂತಹ ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಹಾಗೂ ಆನ್‌ಲೈನ್ ಕೆಲಸಗಳ ಸರ್ವರ್ ಸಮಸ್ಯೆಯನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಬೃಹತ್ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ ಬಂಟ, ಕಾರ್ಯದರ್ಶಿ ಎಲ್.ಎಂ. ಹೆಗಡೆ, ಉಪಾಧ್ಯಕ್ಷರಾದ ಮಾದೇವ ರಾಣೆ, ಪಾಂಡುರಂಗ ವಾಗ್ರೇಕರ, ಸಹ ಕಾರ್ಯದರ್ಶಿ ಸುನೀಲ್ ವಾಸ್, ಪ್ರಶಾಂತ ನಾಯ್ಕ ಹಾಗೂ ಪ್ರಮುಖರಾದ ಪಿ.ಟಿ. ಚೌಹಾಣ್, ಜೈ ರಂಗನಾಥ್, ಗಣೇಶ ಬಿಷ್ಠಣ್ಣನರ್, ಉಮೇಶ ದೊಡ್ಮನಿ, ಅಂಕೋಲಾದ ಗಣಪತಿ ನಾಯಕ, ವಿ. ಆರ್. ತಾಂಡೇಲ್, ಹೊನ್ನಾವರದ ಸತೀಶ್ ನಾಯ್ಕ, ಭಟ್ಕಳದ ಕೆ. ಬಿ. ಮಡಿವಾಳ ಸೇರಿದಂತೆ ಜಿಲ್ಲೆಯ ನೂರಾರು ಮುಖ್ಯಾಧ್ಯಾಪಕರು, ಅನುದಾನಿತ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
