ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಣ್ಣಿನ ಮಗನಿಗೆ ಕಣ್ಣೀರಿನ ಅಂತಿಮ ವಿದಾಯ!

Pakka News Web • 21 ಜುಲೈ 2026,

ದೇಶಸೇವೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ಯೋಧನೊಬ್ಬ ಇಂದು ಕೊನೆಯ ಬಾರಿಗೆ ತನ್ನ ಹುಟ್ಟೂರಿಗೆ ಮರಳಿದ. ಗಡಿ ಕಾಯುತ್ತಿದ್ದ ಕೈಗಳು ಇಂದು ಮೌನವಾಗಿ, ದೇಶಕ್ಕಾಗಿ ಮಿಡಿಯುತ್ತಿದ್ದ ಎದೆ ಸ್ತಬ್ಧವಾಗಿದೆ. ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಂಗೋಳ -ಮಾಲಾಂಗಿಣಿ ಗ್ರಾಮದ ಯೋಧ ಈಶ್ವರ ವಸಂತ ನಾಯ್ಕ ಅವರ ಪಾರ್ಥಿವ ಶರೀರ ಮಂಗಳವಾರ  ಜೋಯಿಡಾಕ್ಕೆ ಆಗಮಿಸಿದಾಗ, ಇಡೀ ತಾಲೂಕೇ ಶೋಕದಲ್ಲಿ ಮುಳುಗಿತ್ತು.

ಪಾರ್ಥಿವ ಶರೀರ ಜೋಯಿಡಾ ಶಿವಾಜಿ ವೃತ್ತವನ್ನು ತಲುಪುತ್ತಿದ್ದಂತೆಯೇ, ಕಣ್ಣೀರು ತುಂಬಿದ ಕಣ್ಣುಗಳಿಂದ ಸಾರ್ವಜನಿಕರು, ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಒಟ್ಟುಗೂಡಿ ವೀರ ಯೋಧನಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು. ದೇಶಕ್ಕಾಗಿ ಪ್ರಾಣ ತ್ಯಜಿಸಿದ ಆ ಧೀರ ಪುತ್ರನಿಗೆ ಪುಷ್ಪನಮನ ಅರ್ಪಿಸಿ, ಕಂಬನಿ ತುಂಬಿದ ಕಣ್ಣುಗಳಿಂದಲೇ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಬಳಿಕ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಇರಂಗೋಳ-ಮಾಲಾಗಿಂಣಿಗೆ ಕೊಂಡೊಯ್ಯಲಾಯಿತು. ಅಲ್ಲಿ, ಮಗನ ಕೊನೆಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದ ಕುಟುಂಬ ಸದಸ್ಯರು, ಬಂಧು-ಬಳಗ, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಹೆತ್ತವರ ಆಕ್ರಂದನ, ಗ್ರಾಮಸ್ಥರ ಮೌನ ದುಃಖ ಇಡೀ ಊರನ್ನೇ ಆವರಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ, ಯೋಧ ಈಶ್ವರ ವಸಂತ ನಾಯ್ಕ ಅವರು ದೇಶಸೇವೆಯಲ್ಲಿ ತೋರಿದ ಬದ್ಧತೆಯನ್ನು ಸ್ಮರಿಸಿ, ಅವರ ಅಕಾಲಿಕ ನಿಧನ ತಾಲೂಕಿಗೆ ತುಂಬಲಾರದ ನಷ್ಟ ಎಂದು ಭಾವುಕರಾಗಿ ನುಡಿದರು.

ಒಬ್ಬ ವೀರ ಯೋಧನ ಅಗಲಿಕೆ ಇಂದು ಇಡೀ ಜೋಯಿಡಾ ತಾಲೂಕನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಕೊನೆಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತ ಜನಸಾಗರ, ಕಂಬನಿ ತುಂಬಿದ ಕಣ್ಣುಗಳು – ಇವೆಲ್ಲವೂ ಆ ಯೋಧನ ತ್ಯಾಗ, ಆತನ ಮೇಲಿನ ಗೌರವಕ್ಕೆ ಸಾಕ್ಷಿಯಾಗಿ ನಿಂತಿದ್ದವು. ದೇಶಕ್ಕಾಗಿ ಪ್ರಾಣ ನೀಡಿದ ಆ ಧೀರ ಪುತ್ರನಿಗೆ ಇಡೀ ತಾಲೂಕೇ ಕಣ್ಣೀರಿನ ವಿದಾಯ ಹೇಳಿತು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250