ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದ ಮಹಾಗಣಪತಿ ದೇವಾಲಯದಲ್ಲಿ ಭಕ್ತರಿಗೊಂದು ಮಹತ್ವದ ಬದಲಾವಣೆ ಎದುರಾಗಿದೆ. ದೇವಾಲಯದ ಅತ್ಯಂತ ಪ್ರಾಚೀನ ಶಿಲಾ ಮೂರ್ತಿಯು ತೀವ್ರವಾಗಿ ಸವಕಳಿಯಾಗುತ್ತಿರುವುದನ್ನು ಮನಗಂಡಿರುವ ಧಾರ್ಮಿಕ ದತ್ತಿ ಇಲಾಖೆಯು, ವಿಗ್ರಹದ ರಕ್ಷಣೆಯ ಹಿತದೃಷ್ಟಿಯಿಂದ ಸ್ಪರ್ಶ ದರ್ಶನ ಹಾಗೂ ಸಪರ್ಯಾ ಪೂಜಾ ಸೇವೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದೆ.

ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಸುಧಾ ತಳವಾರ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಲವು ಶತಮಾನಗಳ ಇತಿಹಾಸವಿರುವ ಈ ಅಪರೂಪದ ಗಣಪತಿಯ ಕೈ, ಭುಜ ಮತ್ತು ಎದೆಯ ಭಾಗಗಳಲ್ಲಿ ದಿನದಿಂದ ದಿನಕ್ಕೆ ಸವಕಳಿ ಹೆಚ್ಚುತ್ತಿರುವುದು ಅಧಿಕಾರಿಗಳು ಹಾಗೂ ಅರ್ಚಕರ ಆತಂಕಕ್ಕೆ ಕಾರಣವಾಗಿತ್ತು. ಪವಿತ್ರ ವಿಗ್ರಹದ ಮೂಲ ಸ್ವರೂಪ ಹಾಗೂ ಆಯುಷ್ಯವನ್ನು ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ಈ ಹೊಸ ನಿಯಮವು ಸ್ಥಳೀಯರು, ಸಾಮಾನ್ಯ ಭಕ್ತರು ಸೇರಿದಂತೆ ಎಷ್ಟೇ ಪ್ರಭಾವಿ ಗಣ್ಯ ವ್ಯಕ್ತಿಗಳಿಗೂ ಒಂದೇ ರೀತಿ ಅನ್ವಯಿಸಲಿದ್ದು, ಎಲ್ಲರೂ ಇನ್ಮುಂದೆ ಹೊರಗಿನಿಂದಲೇ ದರ್ಶನ ಪಡೆದು ಪುನೀತರಾಗಬೇಕಿದೆ.
ಗೋಕರ್ಣಕ್ಕೆ ಬರುವ ಕೋಟ್ಯಂತರ ಭಕ್ತರು ಶ್ರೀ ಮಹಾಬಲೇಶ್ವರನ ಆತ್ಮಲಿಂಗದ ದರ್ಶನ ಪಡೆಯುವ ಮುನ್ನ, ಮಹಾಗಣಪತನಿಗೆ ಕೈ ಮುಗಿದು, ಮೂರ್ತಿಯನ್ನು ಸ್ಪರ್ಶಿಸಿ ಪೂಜಿಸುವುದು ಅನಾದಿ ಕಾಲದಿಂದಲೂ ಬೆಳೆದುಬಂದಿರುವ ಪದ್ಧತಿ. ಆದರೆ ಮೂರ್ತಿಯ ಪ್ರಸ್ತುತ ಸ್ಥಿತಿಯಿಂದಾಗಿ ಇನ್ಮುಂದೆ ಕೇವಲ ದೂರದ ದರ್ಶನಕ್ಕಷ್ಟೇ ಅವಕಾಶ ಸೀಮಿತವಾಗಲಿದೆ. ಮುಂಬರುವ ಸಂಕಷ್ಟ ಚತುರ್ಥಿ ಹಾಗೂ ಗಣೇಶ ಚತುರ್ಥಿಯಂತಹ ವಿಶೇಷ ಪರ್ವಕಾಲಗಳಲ್ಲೂ ಇದೇ ನಿಯಮ ಮುಂದುವರಿಯಲಿದ್ದು, ಇಲ್ಲಿ ವಿಶೇಷವಾಗಿ ಜರುಗುತ್ತಿದ್ದ ‘ಕೊಟ್ಟೆ ಕಣಜ’ ಮತ್ತು ‘ಸಕ್ಕರೆ ಕಣಜ’ ಪೂಜಾ ಸೇವೆಗಳನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇತಿಹಾಸದ ಅಪರೂಪದ ಕೊಂಡಿಯಾಗಿರುವ ಈ ಶಿಲಾಮೂರ್ತಿಯನ್ನು ಭವಿಷ್ಯದ ತಲೆಮಾರಿಗೆ ಕಾಯ್ದುಕೊಳ್ಳಲು ಭಕ್ತಾದಿಗಳು ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
