ಕಾರವಾರ: ನಗರದ ಕಾಜುಬಾಗದ ಶ್ರೀ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪವಿತ್ರ ಸಂದರ್ಭದ ಅಂಗವಾಗಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನೆರವೇರಿದವು. ದೇವರ ಸ್ಮರಣೆಯೊಂದಿಗೆ ಇಡೀ ದೇವಸ್ಥಾನದ ಆವರಣ ಭಕ್ತಿ ಸಾಗರದಲ್ಲಿ ತೇಲುತ್ತಿತ್ತು.

ಶ್ರೀ ವಿಠ್ಠಲ-ರುಕುಮಾಯಿಯ ದಿವ್ಯ ದರ್ಶನ ಪಡೆದು ಪುನೀತರಾಗಲು ಕಾರವಾರ ನಗರ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು. ಬೆಳಗಿನ ಜಾವದಿಂದಲೇ ದೇವಸ್ಥಾನದ ಮುಂದೆ ಭಕ್ತರ ದೀರ್ಘ ಸಾಲು ಕಂಡುಬಂದಿದ್ದು, ಸಂಪ್ರದಾಯದಂತೆ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಮಹಾಪೂಜೆ ಹಾಗೂ ವಿಶೇಷ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಧನ್ಯತೆ ಮೆರೆದರು.
