ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಶಾಸಕರ ದಮ್ಮು-ತಾಕತ್ತು ಪ್ರಶ್ನಿಸುವ ನೈತಿಕತೆ ಅನಂತಮೂರ್ತಿಗೆ ಇಲ್ಲ

Pakka News Web • 25 ಜುಲೈ 2026,

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಕೇವಲ ಅಪಪ್ರಚಾರಕ್ಕಾಗಿ ಆಧಾರರಹಿತ ಹಾಗೂ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆಗೆ ಶಾಸಕರ ‘ದಮ್ಮು-ತಾಕತ್ತು’ ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ‘ಭೀಮಣ್ಣ ನಾಯ್ಕ್ ಅಭಿಮಾನಿ ಬಳಗ’ ತೀವ್ರ ವಾಗ್ದಾಳಿ ನಡೆಸಿದೆ. ನಾಲಿಗೆ ಹರಿಬಿಟ್ಟು ಮಾತನಾಡುವ ಇಂತಹ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾದೀತು ಎಂದು ಅಭಿಮಾನಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಮಧುಕೇಶ್ವರ ನಾಯ್ಕ ಮಾತನಾಡಿ, ಶಾಸಕ ಭೀಮಣ್ಣ ನಾಯ್ಕ ಅವರು ಕ್ಷೇತ್ರದಲ್ಲೊಬ್ಬ ಉತ್ತಮ ರಾಜಕಾರಣಿಯಾಗಿ ಹಾಗೂ ಕೃಷಿಕರಾಗಿ ಜನರ ವಿಶ್ವಾಸ ಗಳಿಸಿದ್ದಾರೆ. ಇಡೀ ಗ್ರಾಮೀಣ ಭಾಗದಲ್ಲಿ ಅವರ ಜನಪರ ಅಭಿವೃದ್ಧಿ ಕಾರ್ಯಗಳು ಪ್ರಶಂಸೆಗೆ ಪಾತ್ರವಾಗುತ್ತಿರುವ ಈ ಸಂದರ್ಭದಲ್ಲಿ, ಅನಂತಮೂರ್ತಿ ಅವರು ಅಗ್ಗದ ಪ್ರಚಾರಕ್ಕಾಗಿ ಇಂತಹ ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ರಾಘವೇಂದ್ರ ನಾಯ್ಕ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈಚಾರಿಕ ಟೀಕೆಗಳು ಸಹಜ. ಆದರೆ, ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಅವಹೇಳನಕಾರಿ ಪದಗಳನ್ನು ಬಳಸುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರ ವಿರುದ್ಧದ ನಿಂದನಕಾರಿ ಹೇಳಿಕೆಗಳನ್ನು ತಕ್ಷಣವೇ ನಿಲ್ಲಿಸದಿದ್ದರೆ ಮುಂದಾಗುವ ಪರಿಣಾಮಗಳಿಗೆ ಅವರೇ ಹೊಣೆಗಾರರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಸದಸ್ಯರಾದ ರವಿ ನಾಯ್ಕ ಕಲಕರಡಿ, ಜಗದೀಶ ನಾಯ್ಕ, ಅಶೋಕ ಗುಡ್ನಾಪುರ, ಲೋಕೇಶ ನಾಯ್ಕ, ಮಧುಕರ ನಾಯ್ಕ, ಅಣ್ಣಪ್ಪ ನಾಯ್ಕ, ರಮಾಕಾಂತ ನಾಯ್ಕ, ಭದ್ರಗೌಡ, ಗಣಪತಿ ಬಾಶಿ, ಮಂಜುನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250