ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಕರಾವಳಿ ಜಿಲ್ಲೆಯಲ್ಲಿ ಗೋ ಸಂಮಾನ ಅಭಿಯಾನ  

Pakka News Web • 25 ಜುಲೈ 2026,

ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿಯ ಶಂಕರಪುರ ದ್ವಾರಕಾಮಾಯಿ ಮಠದ ಸಾಯಿ ಈಶ್ವರ್ ಗುರೂಜಿ ಅವರ ನೇತೃತ್ವದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಗೋ ಸಂಮಾನ ಅಭಿಯಾನ’ ನಡೆಯುತ್ತಿದೆ ಎಂದು ಅಭಿಯಾನದ ಸಂಚಾಲಕ ಗಜೇಂದ್ರ ಎಸ್. ಬೇಲೆಮನೆ ತಿಳಿಸಿದರು.

ಶನಿವಾರ ಕಾರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಅಭಿಯಾನವನ್ನು ನಾಲ್ಕು ಹಂತಗಳಲ್ಲಿ ರೂಪಿಸಲಾಗಿದ್ದು, ಮೊದಲ ಹಂತವು ಈಗಾಗಲೇ ಯಶಸ್ವಿಯಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ ಎಂದರು. ಇದೀಗ ನಡೆಯುತ್ತಿರುವ ಎರಡನೇ ಹಂತದ ಜಿಲ್ಲಾಮಟ್ಟದ ಅಭಿಯಾನದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಗುತ್ತಿದ್ದು, ಜುಲೈ 27ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಗೋಪ್ರೇಮಿಗಳೊಂದಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಗೋವಿಗೆ ರಾಷ್ಟ್ರೀಯ ಗೌರವಾನ್ವಿತ ಸ್ಥಾನಮಾನ, ಗೋಸೇವೆಗಾಗಿ ಪ್ರತ್ಯೇಕ ಕೇಂದ್ರೀಯ ಸಚಿವಾಲಯ ಹಾಗೂ ಗೋಚಾರ ಮಂಡಳಿ ಸ್ಥಾಪನೆ ಈ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. ಈ ಬೇಡಿಕೆಗಳಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ, ಸಾಧು-ಸಂತರ ನೇತೃತ್ವದಲ್ಲಿ 2027ರ ಏಪ್ರಿಲ್ ತಿಂಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಘುವೀರ್ ಗುರೂಜಿ, ಸಂತೋಷ್ ಹಾಗೂ ಶ್ಯಾಮ್ ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250