ಕಾರವಾರ: ಕರಾವಳಿಯ ಕೊಂಕಣಿ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಚಿತ್ರಕಲೆಯ ಮೂಲಕ ಪರಿಚಯಿಸುವ ‘ರಂಗ ಪರ್ಯಟನ’ ಅಭಿಯಾನಕ್ಕೆ ಕಾರವಾರದ ಪತ್ರಿಕಾ ಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಸೇಂಟ್ ಮಿಲಾಗ್ರಿಸ್ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರು ಬಣ್ಣ ಬಳಿಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಚಿತ್ರಕಲೆ ಮತ್ತು ಪತ್ರಿಕೋದ್ಯಮ ಎರಡೂ ಸಮಾಜದ ಕನ್ನಡಿಗಳಿದ್ದಂತೆ. ಭಾಷಣಕ್ಕಿಂತಲೂ ಪರಿಣಾಮಕಾರಿಯಾಗಿ ಜನರನ್ನು ಯೋಚಿಸುವಂತೆ ಮಾಡುವ ಶಕ್ತಿ ಕಲೆಗಿದ್ದು, ಇಂತಹ ಕಾರ್ಯಕ್ರಮಗಳು ಯುವ ಕಲಾವಿದರಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ ಎಂದರು.
ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ, ಜುಲೈ 25ರಿಂದ ಆಗಸ್ಟ್ 8ರವರೆಗೆ 15 ದಿನಗಳ ಕಾಲ ನಡೆಯುವ ಈ ಪರ್ಯಟನೆಯು ಕಾರವಾರ, ಯಲ್ಲಾಪುರ, ಶಿರಸಿ, ಹೊನ್ನಾವರ, ಹೆಬ್ರಿ, ಕಾರ್ಕಳ ಹಾದು ಮಂಗಳೂರಿನಲ್ಲಿ ಸಂಪನ್ನಗೊಳ್ಳಲಿದೆ. ಆರು ಮಂದಿ ಕಲಾ ತಜ್ಞರು ಕೊಂಕಣಿ ಸಮುದಾಯದ ಜನರ ಜೀವನಶೈಲಿ, ಆಚಾರ-ವಿಚಾರ ಹಾಗೂ ಐತಿಹಾಸಿಕ ಸ್ಥಳಗಳ ಚಿತ್ರ ಬಿಡಿಸಲಿದ್ದು, ಇವುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕವಾಗಿ ಪ್ರಕಟಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಲಾವಿದರಿಗೆ ಬ್ಯಾಚ್ ವಿತರಿಸಲಾಯಿತು. ಅಕಾಡೆಮಿ ಸದಸ್ಯರಾದ ಸುನೀಲ್ ಸಿದ್ಧಿ, ವಸಂತ ಬಾಂದೇಕರ್, ಜೇಮ್ಸ್ ಲೋಪೇಸ್, ವಿಲ್ಸನ್ ಸೋಜಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
