ಕಾರವಾರ:ಸರ್ಕಾರದಿಂದ ಬಡಜನರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅನಧಿಕೃತವಾಗಿ ಖರೀದಿ ಮಾಡುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆಯಡಿ 15,819 ಹಾಗೂ ಆದ್ಯತಾ (ಬಿಪಿಎಲ್) ಯೋಜನೆಯಡಿ 2,88,920 ಸೇರಿದಂತೆ ಒಟ್ಟು 3,04,739 ಪಡಿತರ ಚೀಟಿದಾರರಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಗ್ಯಾರಂಟಿ ಯೋಜನೆಯಡಿ ಅಂತ್ಯೋದಯ ಕಾರ್ಡ್ಗೆ 35 ಕೆಜಿ ಹಾಗೂ ಆದ್ಯತಾ ಕಾರ್ಡ್ನ ಪ್ರತಿ ಯೂನಿಟ್ಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಧಾನ್ಯವು ಕುಟುಂಬದ ಸ್ವಂತ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ.
ಒಂದು ವೇಳೆ ಪಡಿತರದಾರರು ಅಕ್ಕಿಯನ್ನು ಮಾರಾಟ ಮಾಡಿದ್ದು ಕಂಡುಬಂದರೆ ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಸಾರ್ವಜನಿಕರಿಂದ ಅನಧಿಕೃತವಾಗಿ ಅಕ್ಕಿ ಸಂಗ್ರಹಿಸುವುದು, ದಾಸ್ತಾನು ಮಾಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುವುದು ಅಥವಾ ಖರೀದಿ ಮಾಡುವುದು ಕಂಡುಬಂದಲ್ಲಿ, ಅವರ ವಿರುದ್ಧ ‘ಅವಶ್ಯ ವಸ್ತುಗಳ ಕಾಯ್ದೆ 1955’ ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ದೂರುಗಳಿದ್ದಲ್ಲಿ ಸಾರ್ವಜನಿಕರು ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕರು ಅಥವಾ ಕಾರವಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ನೇರವಾಗಿ ಇಲ್ಲವೇ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
