ಸಿದ್ದಾಪುರ :ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಡೆಸಿದ ಜಿಪಿಎಸ್ ಸರ್ವೆ ಹಾಗೂ ಒಕ್ಕಲೆಬ್ಬಿಸುವ ಆದೇಶದಲ್ಲಿ ಸರ್ವೆ ಸಂಖ್ಯೆಗಳ ವ್ಯತ್ಯಾಸವಿದೆ. ಇದರಿಂದ ನಿವೃತ್ತ ಸೈನಿಕನ ಕುಟುಂಬ ಆತಂಕಕ್ಕೊಳಗಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದ್ದಾರೆ.
ಹುಸೂರು ಗ್ರಾಮದ ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ಅರ್ಜಿಗೆ ಸಂಬಂಧಿಸಿದ ಜಿಪಿಎಸ್ ಸರ್ವೆಯಲ್ಲಿ ಸಾಗುವಳಿ ಕ್ಷೇತ್ರವನ್ನು ಸರ್ವೆ ಸಂಖ್ಯೆ 210ರಲ್ಲಿ ಗುರುತಿಸಲಾಗಿತ್ತು. ಆದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ನೀಡಿರುವ ಒಕ್ಕಲೆಬ್ಬಿಸುವ ಆದೇಶದಲ್ಲಿ ಸರ್ವೆ ಸಂಖ್ಯೆ 151 ಎಂದು ಉಲ್ಲೇಖಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ದಾಖಲೆಗಳು ಹಾಗೂ ಜಿಪಿಎಸ್ ನಕ್ಷೆಯನ್ನು ಸಮರ್ಪಕವಾಗಿ ಪರಿಶೀಲಿಸದೆ ಆದೇಶ ನೀಡಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪ್ರಕರಣವನ್ನು ಮರು ಪರಿಶೀಲಿಸಬೇಕು.
ಈ ಪ್ರಕರಣದಲ್ಲಿ ಹಲವು ಗೊಂದಲಗಳಿದ್ದು ಅದನ್ನು ನಿವಾರಿಸದೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕ್ರಮ ಕೈಗೊಂಡರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
