ಕಾರವಾರ:ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ಕೀಳು ಮಟ್ಟದ ಹಾಗೂ ದ್ವೇಷಪೂರಿತ ಹೇಳಿಕೆಯನ್ನು ಯುವ ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರಾಜ್ಯ ಸಂಯೋಜಕ ಹಾಗೂ ಕಾರವಾರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫ್ ಖಾದ್ರಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ, ರಾಜಕೀಯ ಲಾಭಕ್ಕಾಗಿ ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ, ಅವಹೇಳನಕಾರಿ ಪದಗಳ ಬಳಕೆ ಹಾಗೂ ದ್ವೇಷ ಪ್ರಚೋದಕ ಭಾಷಣ ಮಾಡುವುದು ಯಾವುದೇ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನಾತ್ಮಕ ಮೌಲ್ಯಗಳನ್ನು ಗೌರವಿಸುವ ಗುರುತರ ಜವಾಬ್ದಾರಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಮೇಲಿದೆ. ಆದರೆ ಅವರು ನೀಡುತ್ತಿರುವ ಹೇಳಿಕೆಗಳು ಆರೋಗ್ಯಕರ ರಾಜಕೀಯ ಸಂಸ್ಕೃತಿಯನ್ನು ಹಾಳುಮಾಡುವುದರ ಜೊತೆಗೆ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿಯ ವಾತಾವರಣವನ್ನು ಸೃಷ್ಟಿಸುವ ಸಣ್ಣತನದ ಯತ್ನವಾಗಿದೆ. ವಿಚಾರಾಧಾರಿತ ವಿರೋಧವನ್ನು ಬಿಟ್ಟು, ಸಮಾಜವನ್ನು ವಿಭಜಿಸುವ ಮತ್ತು ಪ್ರಚೋದನಕಾರಿ ಭಾಷೆ ಬಳಸುವುದು ಖಂಡನೀಯ ಎಂದಿದ್ದಾರೆ.
ದೇಶದ ಕೋಟ್ಯಂತರ ಜನರ ಧ್ವನಿಯಾಗಿರುವ ಸಂಸತ್ತಿನ ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎಸಗುವ ಅಪಚಾರವಾಗಿದೆ. ಆದ್ದರಿಂದ ಶಾಸಕ ಯಶ್‌ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಗೆ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಕಾನೂನು ಚೌಕಟ್ಟನ್ನು ಉಲ್ಲಂಘಿಸಿ ದ್ವೇಷ ಪ್ರಚೋದನೆ ನೀಡಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಸಂವಾದ, ಸಹಿಷ್ಣುತೆ ಮತ್ತು ಪರಸ್ಪರ ಗೌರವದಿಂದ ಮಾತ್ರ ಸಾಧ್ಯ. ರಾಜಕೀಯ ನಾಯಕರು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಜವಾಬ್ದಾರಿಯನ್ನು ಕಾಪಾಡಿಕೊಳ್ಳುವುದು ಕಾಲದ ಅಗತ್ಯವಾಗಿದೆ ಎಂದು ಸೈಯದ್ ಅಶ್ರಫ್ ಖಾದ್ರಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
