ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಶಿಕ್ಷಕರಿಲ್ಲದೆ ಚಡಪಡಿಸುತ್ತಿರುವ ವಿದ್ಯಾರ್ಥಿಗಳು: ಅನುದಾನಿತ ಶಾಲೆಗೆ ತಕ್ಷಣ ನೇಮಕಾತಿಗೆ ಆಗ್ರಹ

Pakka News Web • 1 ಆಗಸ್ಟ್ 2026,

ಕಾರವಾರ: ಅರ್ಹ ಬೋಧಕರ ಕೊರತೆಯಿಂದಾಗಿ ಶಾಲಾ ಮಕ್ಕಳು ದಿನನಿತ್ಯ ಶೈಕ್ಷಣಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದು, ಅವರ ಭವಿಷ್ಯವೇ ತೂಗುಉಯ್ಯಾಲೆಯಲ್ಲಿದೆ. ಕಾರವಾರದ ‘ದಿ ಪೊಪ್ಯುಲರ್ ನ್ಯೂ ಇಂಗ್ಲಿಷ್ ಸ್ಕೂಲ್’‌ನಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಶಿಕ್ಷಣ ಇಲಾಖೆಯು ತಕ್ಷಣವೇ ಭರ್ತಿ ಮಾಡದಿದ್ದರೆ ಮಕ್ಕಳ ಶಿಕ್ಷಣ ಸಂಪೂರ್ಣ ಕುಸಿಯಲಿದೆ ಎಂದು ಚೆಂಡಿಯಾ ಗ್ರೂಪ್ ಆಫ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ವೆಂಕಟರಾವ್ ಪೆಡ್ನೇಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರಿಲ್ಲದೆ ಕತ್ತಲಿಗೆ ದೂಡಲ್ಪಡುತ್ತಿರುವ ಗ್ರಾಮೀಣ ಭಾಗದ ಕನ್ನಡಿಗರ ಮಕ್ಕಳ ಶೈಕ್ಷಣಿಕ ಹಕ್ಕನ್ನು ತಕ್ಷಣ ಕಾಯಬೇಕಿದೆ ಎಂದರು.

ಸ್ವಾತಂತ್ರ್ಯಪೂರ್ವದಲ್ಲೇ ಆರಂಭಗೊಂಡು ಹೆಮ್ಮೆಯ ಇತಿಹಾಸ ಹೊಂದಿರುವ ಈ ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ 70 ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಸಮಾಜ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ನಂತಹ ಪ್ರಮುಖ ವಿಷಯಗಳ ಶಿಕ್ಷಕರ ಹುದ್ದೆಗಳು ಸುದೀರ್ಘ ದಿನಗಳಿಂದ ಖಾಲಿಯಿರುವುದರಿಂದ ಮಕ್ಕಳಿಗೆ ಪಾಠ-ಪ್ರವಚನಗಳೇ ಸಿಗದೆ ತರಗತಿಯಲ್ಲಿ ದಿನವಿಡೀ ಕಳೆಯುವಂತಾಗಿದೆ.

ಜೊತೆಗೆ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಯೂ ಖಾಲಿಯಿದ್ದು, ಶಾಲೆಯ ಆಡಳಿತಾತ್ಮಕ ಕೆಲಸಗಳಿಗೂ ತೊಡಕಾಗಿದೆ. ಮಕ್ಕಳು ಗುಣಮಟ್ಟದ ಕಲಿವಿನಿಂದ ವಂಚಿತರಾಗಿ ಪಡಬಾರದ ಕಷ್ಟ ಪಡುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗಾಗಲೇ ಕಾರವಾರ ನಗರದಲ್ಲಿ ಮೂರು ಶಾಲೆಗಳು ಮುಚ್ಚಿಹೋಗಿದ್ದು, ಈ ಏಕೈಕ ಶಾಲೆಯೂ ಶಿಕ್ಷಕರಿಲ್ಲದೆ ತೊಂದರೆಗೆ ಸಿಲುಕಿ ಮುಚ್ಚುವಂತಾದರೆ ಬಡ ಮಕ್ಕಳ ಗತಿಯೇನು ಎಂದು ಅವರು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಅಮೃತ ಮಹೋತ್ಸವ ಸಂಘದ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ್ ಮಾತನಾಡಿ, ನಗರದ ಶಾಲೆಗಳಿಗೆ ಸಕಲ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡುವ ಸರ್ಕಾರ, ಶಿಕ್ಷಕರಿಲ್ಲದೆ ತೊಂದರೆ ಅನುಭವಿಸುತ್ತಿರುವ ಗ್ರಾಮೀಣ ಭಾಗದ ಶಾಲೆಯತ್ತ ಮುಖಮಾಡದಿರುವುದು ದುರಂತ. ಪ್ರಸ್ತುತ ಶಿಕ್ಷಕರ ಕೊರತೆಯ ನಡುವೆಯೂ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ನೀಡುವ ದೇಣಿಗೆಯಿಂದಲೇ ಶಾಲೆಯನ್ನು ಕಷ್ಟಪಟ್ಟು ಮುನ್ನಡೆಸಲಾಗುತ್ತಿದೆ. ಸರ್ಕಾರ ತಕ್ಷಣವೇ ಸೂಕ್ತ ಬೋಧಕರನ್ನು ನೇಮಿಸಿ, ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಗಣಪತಿ ಬಾಡಕರ್, ಪೂಜಾ ನಾಯಕ್, ಅಜೇಯ್ ಸಾವಕಾರ್, ಸುಧಾಕರ ಮೇಯೇಕರ್, ಪ್ರಕಾಶ್ ನಾಯಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250