ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಆನೆ ದಾಳಿಗೊಳಗಾದ ಸಿಬ್ಬಂದಿಗೆ ಸಿಗದ ನ್ಯಾಯ: ಸಂಕಷ್ಟದಲ್ಲಿ ಹೊರಗುತ್ತಿಗೆ ಕಾವಾಡಿಯ ಕುಟುಂಬ

Pakka News Web • 1 ಆಗಸ್ಟ್ 2026,

ದಾಂಡೇಲಿ: ಕರ್ತವ್ಯ ನಿರತ ವೇಳೆಯಲ್ಲಿ ಸಾಕಾನೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೊರಗುತ್ತಿಗೆ ಆನೆ ಕಾವಾಡಿಯೊಬ್ಬರಿಗೆ ವರ್ಷ ಕಳೆದರೂ ಸೂಕ್ತ ಪರಿಹಾರ, ಪುನರ್ವಸತಿ ಅಥವಾ ಪರ್ಯಾಯ ಉದ್ಯೋಗ ಸಿಗದೆ ಇಲಾಖೆಯಿಂದ ಹೊರಹಾಕಲ್ಪಟ್ಟಿರುವ ಘಟನೆ ನಡೆದಿದ್ದು, ಸಂತ್ರಸ್ತ ಕಾವಾಡಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಿಗೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಪಣಸೋಳಿ ಆನೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಡಾ ಕಾನ ಶಿರಡಾ ಗ್ರಾಮದ ಲಕ್ಕು ಖಂಡು ಪಟಕಾರೆ ಅವರು 2025ರ ಜುಲೈ 30ರಂದು ಇಲಾಖೆಯ ಸಾಕಾನೆಯ ದಾಳಿಗೆ ಸಿಲುಕಿ ಮುಖ, ದವಡೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಘಟನೆ ಬಳಿಕ ಅವರನ್ನು ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಆದರೆ, ಅಪಘಾತದ ಬಳಿಕ ಭಾರವಾದ ಕೆಲಸ ಮಾಡದಂತೆ ವೈದ್ಯರು ನೀಡಿದ ಸೂಚನೆಯಿಂದಾಗಿ ಅವರಿಗೆ ಹಳೆಯ ಕಾಯಕ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದ ನಿರ್ವಹಣೆ ಸಂಪೂರ್ಣ ಕಷ್ಟಕರವಾಗಿದ್ದರೂ, ಇಲಾಖೆಯು ಅವರಿಗೆ ಯಾವುದೇ ಪರಿಹಾರ ಧನ, ಪುನರ್ವಸತಿ ಅಥವಾ ಆರೋಗ್ಯಕ್ಕೆ ಸೂಕ್ತವಾದ ಪರ್ಯಾಯ ಕೆಲಸ ನೀಡದೆ ಹೊರಗೆ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ವಲಯ ಅರಣ್ಯಾಧಿಕಾರಿಗಳು ಪರಿಹಾರಕ್ಕೆ ಅಗತ್ಯವಾದ ಶಿಫಾರಸು ಕೂಡ ಮಾಡಿಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ವನ್ಯಪ್ರಾಣಿ ದಾಳಿಗೊಳಗಾಗುವ ನಾಗರಿಕರಿಗೆ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಪರಿಹಾರ ಧನ ದೊರೆಯುತ್ತದೆ. ಆದರೆ, ದಿನವಿಡೀ ಇಲಾಖೆಯಲ್ಲೇ ಸೇವೆ ಸಲ್ಲಿಸಿದ ಹೊರಗುತ್ತಿಗೆ ಆನೆ ಕಾವಾಡಿಗೆ ಸೂಕ್ತ ನೆರವು ನೀಡದಿರುವ ಅಧಿಕಾರಿಗಳ ಧೋರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ತಕ್ಷಣವೇ ನಿಯಮಾನುಸಾರ ಆರ್ಥಿಕ ನೆರವು ಮತ್ತು ಪರ್ಯಾಯ ಉದ್ಯೋಗ ಒದಗಿಸಬೇಕೆಂದು ಸಂತ್ರಸ್ತರು ಕೋರಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250