ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಭಟ್ಕಳದ ಪ್ರಸಿದ್ಧ ಶ್ರೀ ಮಾರಿಕಾಂಬಾ ಮಾರಿ ಜಾತ್ರೆ ಆಗಸ್ಟ್ 5 ಮತ್ತು 6ರಂದು ಭಕ್ತಿ, ಸಂಭ್ರಮ ಹಾಗೂ ಸಂಪ್ರದಾಯದೊಂದಿಗೆ ನಡೆಯಲಿದೆ. ಜಿಲ್ಲೆ ಸೇರಿದಂತೆ ಶಿರೂರು, ಬೈಂದೂರು ಮತ್ತು ಸುತ್ತಮುತ್ತಲಿನ ಭಾಗಗಳಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪಾದ ಕಂಚುಗಾರ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 28ರಂದು ಶುಭ ಮುಹೂರ್ತದಲ್ಲಿ ಮಾರಿದೇವಿಯ ಮೂರ್ತಿ ಕೆತ್ತನೆ ಕಾರ್ಯ ಆರಂಭಗೊಂಡಿದ್ದು, ಆಗಸ್ಟ್ 4ರಂದು ಮಣ್ಕುಳಿ ಆಚಾರ್ಯರ ಮನೆತನದಲ್ಲಿ ಸುವಾಸಿನಿ ಪೂಜೆ ನಡೆಯಲಿದೆ. ಆಗಸ್ಟ್ 5ರ ಮುಂಜಾನೆ ಆಚಾರ್ಯರ ಮನೆತನದಿಂದ ಮೂರ್ತಿಯನ್ನು ವಿಧಿವತ್ತಾಗಿ ದೇವಸ್ಥಾನ ಆಡಳಿತ ಮಂಡಳಿಗೆ ಹಸ್ತಾಂತರಿಸಿದ ಬಳಿಕ ಭವ್ಯ ಮೆರವಣಿಗೆಯ ಮೂಲಕ ಬೆಳಗ್ಗೆ 5.30ಕ್ಕೆ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಗದ್ದುಗೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಮೂರ್ತಿ ಪ್ರತಿಷ್ಠೆಯ ಬಳಿಕ ಜೈನ ಸಮುದಾಯದ ಅರ್ಚಕರು ಮೊದಲ ಪೂಜೆ ನೆರವೇರಿಸುವ ಸಂಪ್ರದಾಯ ಈ ಜಾತ್ರೆಯ ವಿಶೇಷತೆ ಹಾಗೂ ಭಟ್ಕಳದ ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿದೆ.
ಆಗಸ್ಟ್ 5ರಂದು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಹಾಗೂ ಆಗಸ್ಟ್ 6ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 4ರವರೆಗೆ ಭಕ್ತರಿಗೆ ದೇವಿಯ ದರ್ಶನದ ಅವಕಾಶ ಇರಲಿದೆ. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ ಕಲ್ಪಿಸಲಾಗಿದೆ.
ಆಗಸ್ಟ್ 6ರಂದು ಮಧ್ಯಾಹ್ನ 4 ಗಂಟೆಗೆ ವಿಶೇಷ ಪ್ರಾರ್ಥನೆ ಹಾಗೂ 4.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ಸುಮಾರು 7 ಕಿಲೋಮೀಟರ್ ಉದ್ದದ ಭವ್ಯ ಮೆರವಣಿಗೆಯಲ್ಲಿ ಮಾರಿದೇವಿಯ ಮೂರ್ತಿಯನ್ನು ಮುಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ, ಜಾಲಿಕೋಡಿ ಮಾರ್ಗವಾಗಿ ಸಮುದ್ರ ತೀರಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ನೆರವೇರಲಿದೆ.
ಈ ವರ್ಷದಿಂದ ಭಕ್ತರು ಸಮರ್ಪಿಸುವ ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಗೆ ಬದಲಾಗಿ, ಕುಂಕುಮ ಪ್ರಸಾದ ಹಾಗೂ ಪಂಚಕಜ್ಜಾಯವನ್ನು ಪ್ರತ್ಯೇಕ ಪ್ಯಾಕ್ಗಳಲ್ಲಿ ವಿತರಿಸಲು ದೇವಸ್ಥಾನ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಗೆ ಭಕ್ತರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಇದೇ ವೇಳೆ, ಸಮುದ್ರ ತೀರದಲ್ಲಿ ವಿಸರ್ಜನಾ ಪೂಜೆಯ ಬಳಿಕ ನಡೆಯುವ ಪವಿತ್ರ ಧಾರ್ಮಿಕ ವಿಧಿವಿಧಾನಗಳ ವೇಳೆ ಫೋಟೋ, ವೀಡಿಯೊ ಸೇರಿದಂತೆ ಯಾವುದೇ ರೀತಿಯ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ರಾಮಚಂದ್ರ ಮಹಾಲೆ, ದಿನೇಶ ನಾಯ್ಕ, ಕೇಶವ ನಾಯ್ಕ, ಸಂದೀಪ ಕೊಲ್ಲೆ, ಜೀವೋತ್ತಮ ಪೈ, ಪ್ರೀತಮ್ ಶೇಟ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
