ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮತ್ತೊಮ್ಮೆ ಧ್ವಜಾರೋಹಣ ನೆರವೇರಿಸಲಿರುವ ಸಚಿವ ಮಂಕಾಳು ವೈದ್ಯ!

Pakka News Web • 3 ಆಗಸ್ಟ್ 2026,

ಮಂಕಾಳು ವೈದ್ಯರಿಗೆ ಸಚಿವ ಭಾಗ್ಯ, ಆರ್.ವಿ.ಡಿ. ಬೆಂಬಲಿಗರಿಗೆ ನಿರಾಸೆ!

ಕಾರವಾರ:ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಯ ಬಿಸಿತುಪ್ಪ ಕೊನೆಗೂ ತಣ್ಣಗಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಒಂದು ಕಡೆ ಸಂಭ್ರಮ ಹಾಗೂ ಮತ್ತೊಂದೆಡೆ ತೀವ್ರ ನಿರಾಸೆಯ ಮಿಶ್ರ ವಾತಾವರಣ ಸೃಷ್ಟಿಯಾಗಿದೆ. 

ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಬಿಡುಗಡೆಗೊಳಿಸಿದ 20 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ ಜಿಲ್ಲೆಯ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಅವರಿಗೆ ಪುನಃ ಮಂತ್ರಿಗಿರಿ ಒಲಿದುಬಂದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಅವರ ಸಮ್ಮುಖದಲ್ಲಿ ರೂಪುಗೊಂಡ ಈ ಸಂಪುಟದಲ್ಲಿ ಸ್ಥಾನ ಪಡೆಯುವ ಮೂಲಕ ಮಂಕಾಳು ವೈದ್ಯ ತಮ್ಮ ರಾಜಕೀಯ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಆದರೆ, ಈ ಬಾರಿಯ ಸಂಪುಟ ರಚನೆಯು ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ, ಹಲವು ದಶಕಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಲ್ಲಿ ನಿರಾಸೆ ತಂದಿದೆ. ಜೇಷ್ಠತೆ ಮತ್ತು ಅನುಭವದ ಆಧಾರದ ಮೇಲೆ ಈ ಬಾರಿ ದೇಶಪಾಂಡೆ ಅವರಿಗೆ ಖಂಡಿತವಾಗಿಯೂ ಪ್ರಮುಖ ಖಾತೆಯ ಸಚಿವ ಸ್ಥಾನ ಸಿಗಲಿದೆ ಎಂದೇ ಬಲವಾಗಿ ನಂಬಲಾಗಿತ್ತು. ಆದರೆ, ಹೈಕಮಾಂಡ್ ನಿರ್ಧಾರ ದೇಶಪಾಂಡೆ ಪಾಳೆಯಕ್ಕೆ ದೊಡ್ಡ ಆಘಾತವನ್ನೇ ನೀಡಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಕೂಡ ಸಚಿವ ಸ್ಥಾನದ ರೇಸ್‌ನಲ್ಲಿ ಬಲವಾಗಿ ಮುಂಚೂಣಿಯಲ್ಲಿದ್ದರು. ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನಗಳು ದೊರೆಯಬಹುದು ಅಥವಾ ಅನುಭವಿಗೆ ಆದ್ಯತೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಹೈಕಮಾಂಡ್‌ನ ಅಂತಿಮ ಪಟ್ಟಿ ಅಚ್ಚರಿ ತಂದಿದೆ.

ಕಾಂಗ್ರೆಸ್ ವರಿಷ್ಠರು ಸೋಮವಾರ ಸಂಜೆ ಬಿಡುಗಡೆ ಮಾಡಿದ 20 ಜನರ ಅಧಿಕೃತ ಪಟ್ಟಿಯಲ್ಲಿ ಪಿ. ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ. ಎಸ್. ಬಸವಂತಪ್ಪ, ಬಿ. ನಾಗೇಂದ್ರ, ಟಿ. ರಘುಮೂರ್ತಿ, ಬಿ. ಝಡ್. ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಪುಟ್ಟುರಂಗಶೆಟ್ಟಿ, ಮಂಕಾಳ ವೈದ್ಯ, ಡಾ. ಅಜಯ್ ಸಿಂಗ್, ಎನ್. ಚಲುವರಾಯ ಸ್ವಾಮಿ, ಕೆ. ಎಮ್. ಶಿವಲಿಂಗೆಗೌಡ, ಹೆಚ್. ಸಿ. ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ ಹಾಗೂ ವಿಜಯಾನಂದ ಕಾಶಪ್ಪನವರ ಅವರುಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ, ಮಂಕಾಳು ವೈದ್ಯ ಅವರ ಮರು ಆಯ್ಕೆಯು ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹ ತುಂಬಿದ್ದರೆ, ಆರ್. ವಿ. ದೇಶಪಾಂಡೆ ಮತ್ತು ಸತೀಶ್ ಸೈಲ್ ಅವರಿಗೆ ಸ್ಥಾನ ಸಿಗದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಈ ರಾಜಕೀಯ ಬೆಳವಣಿಗೆಗಳು ಜಿಲ್ಲಾ ಕಾಂಗ್ರೆಸ್ ಒಳಗೆ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ. ಆ.15 ಕ್ಕೆ ಈ ಸಲ ಯಾರು ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಲಿಸ್ಟ್ ಬಿಡುಗಡೆಯ ಬಳಿಕ ಜನರ ಕುತೂಹಲಕ್ಕೆ ತೆರೆ ಬಿದ್ದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250