ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಾಳ್ಕೋಡ ಸರಕಾರಿ ಶಾಲೆಗೆ ವಾಹನ ಸೌಲಭ್ಯ: ಪ್ರಸ್ತುತ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಹಳೆ ವಿದ್ಯಾರ್ಥಿಗಳು 

Pakka News Web • 4 ಆಗಸ್ಟ್ 2026,

ಹೊನ್ನಾವರ: ತಾಲೂಕಿನ ಮಾಳ್ಕೋಡ-ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೊನೆಗೂ ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳ ಬಹುದಿನದ ಕನಸು ನನಸಾಗಿದೆ. ದೂರದ ಬಾಳುಬೆಲೆ, ಕೆಳಗಿನ ಇಡಗುಂಜಿ ಹಾಗೂ ಮಾಳ್ಕೋಡ ಭಾಗದಿಂದ ಶಾಲೆಗೆ ಬರುವ ಮಕ್ಕಳ ಅನುಕೂಲಕ್ಕಾಗಿ ಪಾಲಕರೆಲ್ಲರೂ ಒಂದಾಗಿ ಈ ವಿನೂತನ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಪಾಲಕರ ಈ ಶ್ಲಾಘನೀಯ ಪ್ರಯತ್ನಕ್ಕೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಹಾಗೂ ಹಳೆ ವಿದ್ಯಾರ್ಥಿಗಳ ಸಂಘವು ಪೂರ್ಣ ಬೆಂಬಲ ಸೂಚಿಸಿ ಸಹಕರಿಸಿದೆ.

ಶತಮಾನೋತ್ಸವ ಸಂಭ್ರಮದಲ್ಲಿರುವ ಈ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸಲು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಂತೆ ತಡೆಯಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ದೂರದ ಕಾರಣಕ್ಕಾಗಿ ಮಕ್ಕಳು ಬೇರೆ ಶಾಲೆಗಳತ್ತ ಮುಖ ಮಾಡಬಾರದು ಎಂಬ ಉದ್ದೇಶದಿಂದ ಪಾಲಕರೆಲ್ಲರೂ ಸಭೆ ನಡೆಸಿ ಈ ವಾಹನ ಸೌಕರ್ಯವನ್ನು ಕಲ್ಪಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ವಾಹನಕ್ಕೆ ಅಧಿಕೃತವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದ್ದು, ವಾಹನದಲ್ಲೇ ಶಾಲೆಗೆ ಆಗಮಿಸಿದ ಮಕ್ಕಳು ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅವರು, “ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲು ನಾವು ಮುಂದಾಗಿದ್ದೇವೆ. ದೂರದ ಪ್ರದೇಶದಿಂದ ಬರುವ ಮಕ್ಕಳಿಗೆ ತೊಂದರೆಯಾಗಬಾರದೆಂದು ಪಾಲಕರೇ ಮುತುವರ್ಜಿ ವಹಿಸಿ ವಾಹನ ವ್ಯವಸ್ಥೆ ಮಾಡಿಕೊಂಡಿರುವುದರಿಂದ, ಊರಿನ ಮಕ್ಕಳು ಬೇರೆಡೆಗೆ ಹೋಗುವುದು ತಪ್ಪಿದಂತಾಗಿದೆ. ಈ ವಾಹನದ ನಿರ್ವಹಣೆಗೆ ಬೇಕಾಗುವ ಆರ್ಥಿಕ ನೆರವನ್ನು ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಕ್ರೋಢೀಕರಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

SDMC ಅಧ್ಯಕ್ಷ ರಾಜೇಶ ಎಂ. ಶೆಟ್ಟಿ ಅವರು ಮಾತನಾಡಿ, “ನಮ್ಮ ಶಾಲೆಯಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ತರಬೇತಿಗಳನ್ನು ಆರಂಭಿಸಲಾಗಿದ್ದು, ಅತ್ಯುತ್ತಮ ಶಿಕ್ಷಣ ನೀಡಲು ಶ್ರಮಿಸಲಾಗುತ್ತಿದೆ. ಪಾಲಕರು ಕಲ್ಪಿಸಿರುವ ಈ ವಾಹನ ವ್ಯವಸ್ಥೆಗೆ SDMC ಸಂಪೂರ್ಣ ಸಹಕಾರ ನೀಡಲಿದ್ದು, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯಾ ನಾಯ್ಕ, ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಕ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶಂಕರ ಗಣಪತಿ ನಾಯ್ಕ, ಜಿ.ಕೆ. ಹೆಗಡೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ ಎಚ್. ನಾಯ್ಕ, SDMC ಉಪಾಧ್ಯಕ್ಷೆ ಭಾರತಿ ನಾಗರಾಜ ನಾಯ್ಕ ಹಾಗೂ ಮುಖ್ಯಾಧ್ಯಾಪಕಿ ಲಕ್ಷ್ಮೀ ಎನ್. ಭಟ್ಟ ಉಪಸ್ಥಿತರಿದ್ದರು.

ಅಲ್ಲದೆ, ಪದಾಧಿಕಾರಿಗಳಾದ ಮಂಜುನಾಥ ಕೃಷ್ಣ ನಾಯ್ಕ, ಮಂಜುನಾಥ ಶಂಕರ ನಾಯ್ಕ, ವೆಂಕಟ್ರಮಣ ಜಿ. ನಾಯ್ಕ, ಕಮಲಾಕರ್ ಎನ್. ನಾಯ್ಕ, ಕೇಶವ ಈರಾ ಅಂಬಿಗ, ಗಣೇಶ ಎಸ್. ನಾಯ್ಕ, ವೀಣಾ ಪಿ. ನಾಯ್ಕ, ಶರಾವತಿ ಗೌಡ, ಲಕ್ಷ್ಮೀ ನಾಯ್ಕ, ಶಿಕ್ಷಕರಾದ ವಿಜಿ ಭಟ್ಟ, ಭಾಸ್ಕರ ನಾಯ್ಕ, ವನಿತಾ ಹೆಗಡೆ ಹಾಗೂ ಅಪಾರ ಸಂಖ್ಯೆಯ ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250