ಕಾರವಾರ:ಉತ್ತಮ ಸಮಾಜ, ಆದರ್ಶ ಸಮಾಜ ಹಾಗೂ ಸಂವಿಧಾನದ ಮೌಲ್ಯಗಳನ್ನು ಆಧರಿಸಿದ ಸಮಾಜವನ್ನು ನಿರ್ಮಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿರಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ನಟ ಹಾಗೂ ಹೋರಾಟಗಾರ ಚೇತನ್ ಅವರು ಕರೆ ನೀಡಿದರು.
ಕಾರವಾರಕ್ಕೆ ಆಗಮಿಸಿದ ಚೇತನ್ ಅವರನ್ನು ರಾಜ್ಯ ಪ್ರಗತಿಪರ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಯಲಕಪಾಟಿ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರೊಂದಿಗೆ ಸೇರಿ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಏಳಿಗೆ ಹಾಗೂ ದಲಿತರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ನಂತರ ಮಾತನಾಡಿದ ಚೇತನ್ ಅವರು, ಎಲ್ಲಾ ರೀತಿಯ ಸಂಘಟನೆಗಳು ಒಗ್ಗೂಡಿ ಹೋರಾಟದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಎಲ್ಲರೂ ಭೇದಭಾವವಿಲ್ಲದೆ ಒಂದಾಗಿ ಶ್ರಮಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ್ ಸಿ. ತಳವಾರ, ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜಿ.ಡಿ. ಮನೋಜ್, ಭೀಮ ಸೇನಾ ರಾಜ್ಯ ಕೋಶಾಧ್ಯಕ್ಷ ತಿಮ್ಮಪ್ಪ ರಾಮ ಮುಕ್ರಿ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಮಾರುತಿ ನಿಂಗಪ್ಪ ಗವಾಡಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ದೀಪಕ್ ಕುಡಾಳಕರ್, ಭೀಮ ಸೇನಾ ಮಹಿಳಾ ಜಿಲ್ಲಾಧ್ಯಕ್ಷೆ ಸವಿತಾ ಮುಕ್ರಿ, ಮೆಹಬೂಬ್ ಇನಾಮ್ದಾರ್, ಸುರೇಶ್ ಪೂಜಾರಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
