ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನಿರಾಕರಣೆ: ಉತ್ತರ ಕನ್ನಡ ಜಿಲ್ಲೆಗೆ ತೀವ್ರ ಅನ್ಯಾಯ: ನಾಗೇಶ್ ಎಸ್.

Pakka News Web • 6 ಆಗಸ್ಟ್ 2026,

ಹೊನ್ನಾವರ: ಭಟ್ಕಳ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಮಂಕಾಳ ವೈದ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡದೆ ಕೈಬಿಟ್ಟಿರುವುದು ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಹಾಗೂ ಬೇಸರ ಮೂಡಿಸಿದೆ. ಆರಂಭಿಕ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದರೂ, ಕೊನೆಯ ಕ್ಷಣದಲ್ಲಿ ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಕರಾವಳಿ ಭಾಗದ ಜನರ ವಿಶ್ವಾಸಕ್ಕೆ ತೀವ್ರ ಧಕ್ಕೆ ತಂದಿದೆ ಎಂದು ಮಂಕಾಳು‌‌ ವೈದ್ಯ ಅಭಿಮಾನಿ ಹೊನ್ನಾವರದ ಕುದ್ರಿಗಿಯ ನಾಗೇಶ್ ಎಸ್. ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿದ ಅವರು ಸಾಮಾನ್ಯ ಮೀನುಗಾರ ಸಮುದಾಯದಿಂದ ಹಂತ ಹಂತವಾಗಿ ಬೆಳೆದು ಬಂದಿರುವ ಮಂಕಾಳ ವೈದ್ಯ ಅವರು, “ಜನಸೇವೆಯೇ ಜನಾರ್ಧನ ಸೇವೆ” ಎಂಬ ಧ್ಯೇಯದೊಂದಿಗೆ ನಿರಂತರವಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಜನನಾಯಕನಿಗೆ ಸಚಿವ ಸ್ಥಾನ ನಿರಾಕರಿಸಿರುವುದು ಕೇವಲ ಒಬ್ಬ ವ್ಯಕ್ತಿಗೆ ಆಗಿರುವ ಅನ್ಯಾಯವಲ್ಲ, ಬದಲಿಗೆ ಇಡೀ ಕರಾವಳಿ ಭಾಗದ ಜನರ ಆಶೋತ್ತರಗಳಿಗೆ ಉಂಟಾದ ಹಿನ್ನಡೆಯಾಗಿದೆ. ಈ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ್ದ ವೈದ್ಯ ಅವರು, ರಾಜ್ಯದ ಮೀನುಗಾರಿಕಾ ಕ್ಷೇತ್ರ ಹಾಗೂ ಬಂದರುಗಳ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂತಹ ಅನುಭವಿ ಹಾಗೂ ಕ್ರಿಯಾಶೀಲ ನಾಯಕನನ್ನು ಸಂಪುಟದಿಂದ ಹೊರಗಿಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಾಗೂ ಪಕ್ಷದ ವರಿಷ್ಠರು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜನರ ಭಾವನೆಗಳಿಗೆ ಸೂಕ್ತ ಗೌರವ ನೀಡಿ, ಮಂಕಾಳ ವೈದ್ಯ ಅವರಿಗೆ ರಾಜ್ಯ ಮಟ್ಟದಲ್ಲಿ ಅರ್ಹ ಸ್ಥಾನಮಾನ ಒದಗಿಸಬೇಕು ಎಂಬುದು ಜಿಲ್ಲೆಯ ಜನರ ಒಕ್ಕೊರಲಿನ ಆಗ್ರಹವಾಗಿದೆ ಎಂದು ಮಂಕಾಳ ವೈದ್ಯ ಅವರ ಅಭಿಮಾನಿಗಳ ಬಳಗದ ಪರವಾಗಿ ಹೊನ್ನಾವರದ ಕುದ್ರಿಗಿಯ ನಾಗೇಶ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250