ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ, ಕೈಗಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕೇರವಡಿ-ಮಲ್ಲಾಪುರ ರಸ್ತೆಯು ಕಳೆದ ಎರಡು-ಮೂರು ತಿಂಗಳುಗಳಿಂದ ತೀವ್ರವಾಗಿ ಹಾಳಾಗಿದ್ದು, ಈ ಭಾಗದಲ್ಲಿ ವಾಹನ ಸವಾರರು ಮತ್ತು ಸಾರ್ವಜನಿಕರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡ-ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರ ಸಂಪೂರ್ಣ ದುಸ್ತರವಾಗಿದೆ. ಈ ಗಂಭೀರ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಘನಶ್ಯಾಮ ಬಾಂದೇಕರ ಅವರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ಶಾಸಕ ಸತೀಶ್ ಸೈಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗೋವಾದ ಕಾಣಕೋಣದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಸಚಿವರನ್ನು ಖುದ್ದಾಗಿ ಭೇಟಿಯಾದ ಬಾಂದೇಕರ ಅವರು, ಪ್ರದೇಶದ ಕಷ್ಟಕರ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದರು. ರಸ್ತೆಯ ದುರಾವಸ್ಥೆಯಿಂದಾಗಿ ನಿತ್ಯ ಸಂಚರಿಸುವ ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಸರಕು ಸಾಗಣೆ ವಾಹನಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನ ಮಾಲೀಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಷ್ಟೇ ಅಲ್ಲದೆ, ರಸ್ತೆ ಮಧ್ಯದಲ್ಲೇ ವಾಹನಗಳು ಕೆಟ್ಟು ನಿಲ್ಲುತ್ತಿರುವುದರಿಂದ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿ, ಹಿಂಬದಿಯಿಂದ ಬರುವ ಇತರ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ರಸ್ತೆಯ ಈ ಅಪಾಯಕಾರಿ ಸ್ಥಿತಿಯಿಂದಾಗಿ ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿ, ಸಾರ್ವಜನಿಕರ ಅಮೂಲ್ಯ ಜೀವಕ್ಕೆ ಅಪಾಯ ಎದುರಾಗುವ ಭೀತಿ ವ್ಯಕ್ತವಾಗಿದೆ. ಆದ್ದರಿಂದ, ಯಾವುದೇ ಪ್ರಾಣಹಾನಿ ಅಥವಾ ಅನಾಹುತಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು, ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕು. ರಸ್ತೆಯಲ್ಲಿ ಬಿದ್ದಿರುವ ಅಪಾಯಕಾರಿ ಹೊಂಡಗಳನ್ನು ತಕ್ಷಣ ಮುಚ್ಚಿ, ಸುಗಮ ಸಂಚಾರಕ್ಕೆ ಪರ್ಯಾಯ ಹಾಗೂ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಘನಶ್ಯಾಮ ಬಾಂದೇಕರ ಅವರು ಸಚಿವರಿಗೆ ಅತ್ಯಂತ ಗಂಭೀರವಾಗಿ ಆಗ್ರಹಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಚಿವರ ಭರವಸೆ ನೀಡಿದ್ದಾರೆ.
