ಮುಂಡಗೋಡ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಭದ್ರತೆ ಕುರಿತ ಆತಂಕ ಮತ್ತಷ್ಟು ಗಾಢವಾಗಿದೆ.
ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಮೂಡುತ್ತಿದ್ದು, ಕಳ್ಳರ ಹಾವಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ನಿನ್ನೆ ಒಂದೇ ರಾತ್ರಿ ತಾಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಬಾಚಣಕಿ ಗ್ರಾಮದ ಪ್ರಸಿದ್ಧ ಮರಿಯಮ್ಮ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಹುಂಡಿಯನ್ನೇ ಹೊತ್ತುಕೊಂಡು ಪರಾರಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಹುಂಡಿಯನ್ನು ತೆರೆಯದ ಕಾರಣ ಅದರಲ್ಲಿ ಗಮನಾರ್ಹ ಪ್ರಮಾಣದ ಕಾಣಿಕೆ ಹಣ ಸಂಗ್ರಹವಾಗಿರಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇದೇ ರಾತ್ರಿ ನಂದಿಪುರ ಗ್ರಾಮದ ಶ್ರೀನಿವಾಸ್ ಅವರ ಅಂಗಡಿಯ ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಅಂಗಡಿಯಿಂದ ಎಷ್ಟು ನಗದು ಹಾಗೂ ಯಾವ್ಯಾವ ವಸ್ತುಗಳು ಕಳುವಾಗಿವೆ ಎಂಬುದು ಪೊಲೀಸ್ ತನಿಖೆ ಬಳಿಕವೇ ಸ್ಪಷ್ಟವಾಗಲಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಎರಡೂ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಮುಂಡಗೋಡ ಪಟ್ಟಣದಲ್ಲಿ ನಡೆದ ಹಗಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ಗ್ಯಾಂಗ್ನ ಮೊಹಮ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಇದರಿಂದ ಕಳ್ಳತನ ಪ್ರಕರಣಗಳ ತನಿಖೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಳೆದ ಕೇವಲ 15 ದಿನಗಳಲ್ಲಿ ಮುಂಡಗೋಡ ತಾಲೂಕಿನಲ್ಲಿ ಐದು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದುವರೆಗೆ ಒಂದೇ ಒಂದು ಬಂಧನ ನಡೆದಿದ್ದರೂ, ಉಳಿದ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಗತಿ ಕಾಣಿಸಿಲ್ಲ. ಈ ಬೆಳವಣಿಗೆಗಳಿಂದ ತಾಲೂಕಿನ ಜನರು ಭಯಭೀತರಾಗಿದ್ದು, ರಾತ್ರಿ ಗಸ್ತು ಹೆಚ್ಚಿಸಿ ಕಳ್ಳರನ್ನು ಶೀಘ್ರ ಬಂಧಿಸಿ ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
