ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಉತ್ತರ ಕನ್ನಡ ಮಂಗಳೂರು ಪೀಠಕ್ಕೆ ಸೇರ್ಪಡೆಗೆ ವಿರೋಧ: ಆ. 13ಕ್ಕೆ ವಕೀಲರ ಸಂಘದಿಂದ ಪ್ರತಿಭಟನೆ

Pakka News Web • 10 ಆಗಸ್ಟ್ 2026,

ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ವಕೀಲರ ಸಂಘವು ಈ ನಿರ್ಧಾರವನ್ನು ಖಂಡಿಸಿ ಬೃಹತ್ ಹೋರಾಟಕ್ಕೆ ಕರೆ ನೀಡಿದೆ.

ಕಾರವಾರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ಅವರು, ಯಾವುದೇ ಕಾರಣಕ್ಕೂ ಉತ್ತರ ಕನ್ನಡವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಲು ಬಿಡುವುದಿಲ್ಲವೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿರೋಧದ ಭಾಗವಾಗಿ ಆಗಸ್ಟ್ 13ರಂದು ವಕೀಲರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ನಗರದ ಮಿತ್ರಸಮಾಜದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲರ ಸಂಘಗಳು, ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಪ್ರಸ್ತಾವನೆಯು ವಕೀಲರಿಗಿಂತ ಹೆಚ್ಚಾಗಿ ಕಕ್ಷಿದಾರರಿಗೆ ಆರ್ಥಿಕ ಹೊರೆ ಮತ್ತು ತೊಂದರೆಯನ್ನು ಉಂಟುಮಾಡಲಿದ್ದು, ಇದು ಕೇವಲ ವಕೀಲರ ಸಮಸ್ಯೆಯಾಗಿರದೆ ಇಡೀ ಸಾರ್ವಜನಿಕರ ಹಿತಾಸಕ್ತಿಯ ಪ್ರಶ್ನೆಯಾಗಿದೆ. ಪ್ರಸ್ತುತ ಕಾರವಾರದ ಕೊಂಕಣಿ ಭಾಷಿಕರು ಸೇರಿದಂತೆ ಜಿಲ್ಲೆಯ ಜನರು ಧಾರವಾಡ ಪೀಠದಲ್ಲಿ ಕನ್ನಡದಲ್ಲಿ ಸುಲಭವಾಗಿ ವ್ಯವಹರಿಸುತ್ತಿದ್ದಾರೆ. ಆದರೆ ತುಳು ಭಾಷೆ ಪ್ರಧಾನವಾಗಿರುವ ಮಂಗಳೂರಿಗೆ ಪೀಠವನ್ನು ಸ್ಥಳಾಂತರಿಸಿದರೆ ಭಾಷಾ ತೊಡಕುಗಳು ಎದುರಾಗುವ ಭೀತಿಯಿದೆ.

ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡುವಂತೆ ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯ ಎಂಟು ಜಿಲ್ಲೆಗಳ ವಕೀಲರ ಸಂಘಗಳೂ ಸಹ ಈ ವಿರೋಧಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಭೌಗೋಳಿಕವಾಗಿಯೂ 10,227 ಚದರ ಕಿಲೋಮೀಟರ್ ವ್ಯಾಪ್ತಿ ಹಾಗೂ 140 ಕಿಲೋಮೀಟರ್ ಸುದೀರ್ಘ ಕರಾವಳಿ ತೀರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯು ದಕ್ಷಿಣ ಕನ್ನಡ ಮತ್ತು ಉಡುಪಿಗಿಂತಲೂ ದೊಡ್ಡದಾಗಿದೆ. ಆಡಳಿತಗಾರರು ಕರಾವಳಿ ಎಂದರೆ ಕೇವಲ ಮಂಗಳೂರು ಎಂದು ಭಾವಿಸುವುದು ಸರಿಯಲ್ಲ. ಒಂದು ವೇಳೆ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಅತ್ಯಗತ್ಯವಿದ್ದರೆ, 1857ರ ಬ್ರಿಟಿಷರ ಆಡಳಿತಾವಧಿಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಾಗೂ ಭೌಗೋಳಿಕವಾಗಿ ಕೇಂದ್ರಸ್ಥಾನವಾಗಿರುವ ಹೊನ್ನಾವರವೇ ಅತ್ಯಂತ ಸೂಕ್ತ ಸ್ಥಳವಾಗಿದೆ. ಜಿಲ್ಲೆಯಲ್ಲಿ 11 ವಕೀಲರ ಸಂಘಗಳಿದ್ದರೂ ಮಂಗಳೂರಿನಲ್ಲಿ ಪೀಠ ಸ್ಥಾಪಿಸಲು ಹೊರಟಿರುವುದು ತರ್ಕಬದ್ಧವಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಜಿಲ್ಲೆಗೆ ಬೇಡವಾದ ಯೋಜನೆಗಳನ್ನು ಹೇರುತ್ತಿರುವ ಸರ್ಕಾರಗಳ ವಿರುದ್ಧ ಜನಪ್ರತಿನಿಧಿಗಳು ಧ್ವನಿ ಎತ್ತಬೇಕೆಂದು ಆಗ್ರಹಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್, ದೀಪಾ, ಸಂಜಯ ಸಾಳುಂಕೆ, ಚರಣ್ ಡಿ. ನಾಯ್ಕ, ಲಕ್ಷ್ಮೀ ರಾಣೆ ಹಾಗೂ ಸುಮಿತಾ ಭೂತೆ ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250