ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಸರಕಾರ ನೀಡುವ ಗೌರವ ಧನವನ್ನೇ ಸರಕಾರದ ಕೆಲಸಕ್ಕೆ ವೆಚ್ಚ ಮಾಡುವ ದುಸ್ಥಿತಿ!

Pakka News Web • 11 ಆಗಸ್ಟ್ 2026,

ಸರಕಾರ ನಿಗದಿಪಡಿಸಿದ ದರಕ್ಕೂ ಮಾರುಕಟ್ಟೆ ಬೆಲೆಗೂ ಅಜಾಗಜಾಂತರ ವ್ಯತ್ಯಾಸವಿದ್ದು, ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಮೊಟ್ಟೆ ವೆಚ್ಚವನ್ನು ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಕಷ್ಟದ ಗೌರವ ಧನದಿಂದ ಭರಿಸಬೇಕಾದ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

ಇಲಾಖೆಯಿಂದ ಒಂದು ಮೊಟ್ಟೆಗೆ ಕೇವಲ 6 ರೂಪಾಯಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ (ಸ್ವತಂತ್ರ ಸಂಘಟನೆ) ಉತ್ತರ ಕನ್ನಡ ಜಿಲ್ಲಾ ಸಮಿತಿ ಗಂಭೀರವಾಗಿ ಆರೋಪಿಸಿದೆ.

ಕಾರವಾರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷೆ ಅನಿತಾ ಶೇಟ್ ಹಾಗೂ ಜಿಲ್ಲಾ ಕಾರ್ಯದರ್ಶಿ ಶೋಭಾ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಎದುರಿಸುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ಸುರಿಮಳೆಯನ್ನೇ ಬಿಚ್ಚಿಟ್ಟರು.

ಮಾರುಕಟ್ಟೆಯಲ್ಲಿ ಅದರ ಬೆಲೆ 9 ರೂಪಾಯಿ ತಲುಪಿದೆ. ಉಳಿದ 3 ರೂಪಾಯಿಯನ್ನು ಕಾರ್ಯಕರ್ತೆಯರೇ ತಮ್ಮ ಜೇಬಿನಿಂದ ಹಾಕಬೇಕಾದ ಪರಿಸ್ಥಿತಿಯಿದ್ದು, ಸರಕಾರ ನೀಡುವ ಗೌರವ ಧನವನ್ನೇ ಸರಕಾರದ ಕೆಲಸಕ್ಕೆ ಖರ್ಚು ಮಾಡುವಂತಾಗಿದೆ ಎಂದರು.

ಸಿ ದರ್ಜೆ ನೌಕರರು ನಿರ್ವಹಿಸಬೇಕಾದ ಚುನಾವಣಾ ಬೂತ್ ಲೆವಲ್ (ಬಿಎಲ್‌ಒ) ಕೆಲಸವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 90 ರಷ್ಟು ಅಂಗನವಾಡಿ ಕಾರ್ಯಕರ್ತೆಯರಿಂದ ಬಲವಂತವಾಗಿ ಮಾಡಿಸಲಾಗುತ್ತಿದೆ. ಚುನಾವಣಾ ಆಯೋಗದ ಎಸ್‌ಐಆರ್ ಕೆಲಸ ಮುಗಿಯುವ ಮುನ್ನವೇ ಕಂದಾಯ ಇಲಾಖೆಯ ಮನೆ ಮನೆಗೆ ತೆರಳಿ ಜಾತಿ ಪ್ರಮಾಣ ಪತ್ರ ವಿತರಿಸುವ ಅಭಿಯಾನ, ಗೃಹಲಕ್ಷ್ಮಿ, ಆರೋಗ್ಯ ಇಲಾಖೆಯ ಸರ್ವೆ ಹಾಗೂ ಲಾಲ್ವಾ ಸರ್ವೆಗಳಂತಹ ಹತ್ತಾರು ಇಲಾಖೆಗಳ ಕೆಲಸಗಳನ್ನು ಇವರ ತಲೆಗೆ ಕಟ್ಟಲಾಗುತ್ತಿದೆ. ಜಿಲ್ಲಾಧಿಕಾರಿಗಳ ಆದೇಶವೆಂದು ಹೆದರಿಸಿ, ಬೆದರಿಸಿ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು, ಮಾನಸಿಕ ಕಿರುಕುಳ ನೀಡಲಾಗುತ್ತಿದೆ.

ಅಂಗನವಾಡಿ 50 ವರ್ಷಗಳ ಸುವರ್ಣ ಮಹೋತ್ಸವ ಆಚರಿಸಿಕೊಂಡಿದ್ದರೂ, ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಹತ್ತಾರು ಇಲಾಖೆಗಳ ಕೆಲಸ ವಹಿಸುವ ಸರಕಾರ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನ್ಯಾಯಯುತವಾಗಿ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರೆಂದು ಪರಿಗಣಿಸಬೇಕು. ನೀಡುತ್ತಿರುವ ಕನಿಷ್ಠ ಗೌರವ ಧನವೂ ಮೂರ್ನಾಲ್ಕು ತಿಂಗಳಾದರೂ ಕೈಸೇರುತ್ತಿಲ್ಲ. ಬಜೆಟ್ ಇಲ್ಲವೆಂಬ ನೆಪ ಹೇಳದೆ ಪ್ರತಿ ತಿಂಗಳ 5 ನೇ ತಾರೀಖಿನೊಳಗಾಗಿ ಗೌರವ ಧನ ತಲುಪುವಂತೆ ಆದೇಶಿಸಬೇಕಿದೆ.

3 ರಿಂದ 6 ವರ್ಷದ ಪುಟ್ಟ ಮಕ್ಕಳಿಗೆ ಆಟ, ಪಾಠ, ಹಾಡು, ಕಥೆಗಳ ಮೂಲಕ ಮುಕ್ತ ವಾತಾವರಣ ನೀಡಬೇಕಾದ ಅಂಗನವಾಡಿಗಳು, ಇಲಾಖೇತರ ಕೆಲಸಗಳ ಅತಿಯಾದ ಹೊರೆಯಿಂದಾಗಿ ಮೂಲ ಉದ್ದೇಶದಿಂದ ವಂಚಿತವಾಗುತ್ತಿವೆ. ಇದರಿಂದ ಬೇಸತ್ತ ಪಾಲಕರು ಮಕ್ಕಳನ್ನು ಖಾಸಗಿ ಎಲ್‌ಕೆಜಿ, ಯುಕೆಜಿಗೆ ಸೇರಿಸುತ್ತಿದ್ದು, ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ಮಕ್ಕಳ ಸಂಖ್ಯೆ ಕಡಿಮೆಯಾದರೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನೇ ಕೆಲಸದಿಂದ ವಜಾ ಮಾಡುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಮತ್ತೊಂದೆಡೆ ಸರಕಾರಿ ಕನ್ನಡ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುತ್ತಿದ್ದು, ಅಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.

ಇಲಾಖೆ ನೀಡಿದ ಮೊಬೈಲ್‌ಗಳಲ್ಲಿ ಕಾರ್ಯಕರ್ತೆಯರ ವೈಯಕ್ತಿಕ ಸಿಮ್ ಕಾರ್ಡ್ ಬಳಸಿ ಕೆಲಸ ಮಾಡಬೇಕಾದ ದುಸ್ಥಿತಿಯಿದ್ದು, ಸರಕಾರ ಸಿಮ್ ನೀಡದಿದ್ದರೂ ಕರೆನ್ಸಿ ಹಣವನ್ನೂ ಮರುಪಾವತಿಸುತ್ತಿಲ್ಲ. ದಿನಂಪ್ರತಿ 30 ರಿಂದ 40 ರಿಜಿಸ್ಟರ್‌ಗಳಲ್ಲಿ ದಾಖಲಾತಿ ಬರೆಯುವ ಜೊತೆಗೆ, ಗರ್ಭಿಣಿಯರು, ಬಾಣಂತಿಯರ ಆಹಾರ, ಮನೆ ಭೇಟಿ, ಚುಚ್ಚುಮದ್ದು ಸೇರಿದಂತೆ ಇಲಾಖೆಯ ಎಲ್ಲಾ ಮಾಹಿತಿಯನ್ನು ಮೊಬೈಲ್ ಆ್ಯಪ್‌ಗಳಲ್ಲೂ ಕಡ್ಡಾಯವಾಗಿ ನಮೂದಿಸಬೇಕಾಗಿದೆ. 

ಇಷ್ಟೆಲ್ಲಾ ಕೆಲಸಗಳ ನಡುವೆ ತಾಲೂಕುಗಳಲ್ಲಿ ಸಿಡಿಪಿಒಗಳು ಸಭೆಗೆ ಹಾಜರಾಗುವ ಕಾರ್ಯಕರ್ತೆಯರಿಗೆ ಪ್ರಯಾಣ ಭತ್ಯೆ (ಟಿಎ) ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಜೊತೆಗೆ ಇಲಾಖೆ ನೀಡಿರುವ ಸಮವಸ್ತ್ರಗಳು ತೀರಾ ಕಳಪೆ ಮಟ್ಟದ್ದಾಗಿದ್ದು, ಕೊಡುವಾಗಲೇ ಹರಿದಿರುವುದರಿಂದ ಅವುಗಳನ್ನು ಇಲಾಖೆಗೆ ಮರಳಿಸಲು ನಿರ್ಧರಿಸಲಾಗಿದೆ.

ಸರಕಾರ ಮತ್ತು ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಈ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ ನೌಕರರು ಒಗ್ಗೂಡಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ಸೇರಿದಂತೆ ಬೃಹತ್ ಮತ್ತು ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸಂಘದ ಮುಖಂಡರು ಎಚ್ಚರಿಸಿದ್ದಾರೆ.

 ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಯಮುನಾ ನಾಯ್ಕ, ಲಲಿತಾ ಶೆಟ್ಟಿ, ನೇತ್ರಾವತಿ ನಾಯ್ಕ ಹಾಗೂ ರೇಖಾ ಭಟ್ಟ ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250