Uttara-Kannada
ಪಡಿತರ ಅಕ್ಕಿ ಹಂಚಿಕೆ ಬಗ್ಗೆ ಜಿಲ್ಲಾಧಿಕಾರಿಯಿಂದ ಪ್ರಮುಖ ಮಾಹಿತಿ
Pakka News Web • 12 ಆಗಸ್ಟ್ 2026,

ಕಾರವಾರ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಆಹಾರಧಾನ್ಯವನ್ನು ಇದೇ ಆಗಸ್ಟ್ ಮಾಹೆಯಲ್ಲಿ ಒಟ್ಟಿಗೆ ವಿತರಿಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ವಿಶೇಷ ವಿತರಣೆಯಡಿ ಜಿಲ್ಲೆಯ ಒಟ್ಟು 15,818 ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‌ಗೆ (35+35 ಕೆಜಿ ಸೇರಿ) ಒಟ್ಟು 70 ಕೆಜಿ ಉಚಿತ ಅಕ್ಕಿ ಸಿಗಲಿದೆ. ಅದೇ ರೀತಿ 2,88,833 ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ (5+5 ಕೆಜಿ ಸೇರಿ) ಒಟ್ಟು 10 ಕೆಜಿ ಅಕ್ಕಿಯನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರಸ್ತುತ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣಾ ಪ್ರಕ್ರಿಯೆ ಭರದಿಂದ ಸಾಗಿದೆ.
ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡೂ ತಿಂಗಳ ಪಡಿತರಕ್ಕಾಗಿ ಮಾಹೆವಾರು ಪ್ರತ್ಯೇಕವಾಗಿ ಬೆರಳಚ್ಚು (Biometric) ನೀಡಿ ಉಚಿತವಾಗಿ ಆಹಾರಧಾನ್ಯ ಪಡೆಯಬಹುದಾಗಿದೆ. ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ನೀಡಿದರೆ ಅಥವಾ ಉಚಿತ ಪಡಿತರಕ್ಕೆ ಹಣಕ್ಕೆ ಬೇಡಿಕೆ ಇಟ್ಟರೆ, ಸಾರ್ವಜನಿಕರು ತಕ್ಷಣವೇ ಆಯಾ ತಾಲೂಕಿನ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ಅಥವಾ ಆಹಾರ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸಬಹುದು. ಜೊತೆಗೆ ಉಚಿತ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.