ಕಾರವಾರ: ಇಲ್ಲಿನ ಶೇಜವಾಡಕ್ಕೆ ನೂತನವಾಗಿ ಸ್ಥಳಾಂತರಗೊಂಡಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಆಗ್ರಹಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಜಿಲ್ಲಾ ಸಮಿತಿಯು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ವಿದ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ, ಸದಾನಂದ ಹಾಲ್ ಸಮೀಪ ಸಂಚರಿಸುವ KSRTC ಬಸ್‌ಗಳಿಗೆ ಕಡ್ಡಾಯ ನಿಲುಗಡೆ ನೀಡಬೇಕು. ಶಿರವಾಡ ಗ್ರಾ.ಪಂ. ವ್ಯಾಪ್ತಿಯ ವಸತಿನಿಲಯದ ರಸ್ತೆಯಲ್ಲಿ ರಾತ್ರಿ ವೇಳೆಯ ಸುರಕ್ಷತೆಗಾಗಿ ಬೀದಿದೀಪ ಅಳವಡಿಸಲು ಪಿಡಿಒಗೆ ನಿರ್ದೇಶಿಸಬೇಕು ಎಂದು ಒತ್ತಾಯಿಸಲಾಯಿತು.
ಅಲ್ಲದೆ, ಕಳಪೆ ಆಹಾರ ನೀಡುವುದನ್ನು ತಡೆದು ನಿಗದಿತ ಮೆನು ಪಾಲಿಸುವುದು, ಶುದ್ಧ ಕುಡಿಯುವ ನೀರು, ಗ್ರಂಥಾಲಯ ಸೌಲಭ್ಯ ಹಾಗೂ ವಾರ್ಡನ್ ವಿದ್ಯಾರ್ಥಿಗಳ ಕುಂದುಕೊರತೆಗಳಿಗೆ ಸರಿಯಾಗಿ ಸ್ಪಂದಿಸುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು. ಮನವಿ ಸಲ್ಲಿಕೆ ವೇಳೆ SFI ತಾಲೂಕು ಸಂಚಾಲಕ ವೀರೇಶ್ ರಾಠೋಡ್ ಹಾಗೂ ಮುಖಂಡರಾದ ಶೇಖಪ್ಪ ಬಳ್ಳಾರಿ, ನೂರ್ ಮೊಹಮ್ಮದ್, ಅಶ್ರಫ್, ಮೆಹ್ತಾಬ್, ಸಮೀರ್ ಉಪಸ್ಥಿತರಿದ್ದರು.
