ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಂಗಳೂರು ಹೈಕೋರ್ಟ್ ಪೀಠ ನಮಗೆ ಬೇಡ : ಬೃಹತ್ ಪ್ರತಿಭಟನಾ ರ‌್ಯಾಲಿ!

Pakka News Web • 13 ಆಗಸ್ಟ್ 2026,

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದನ್ನು ಖಂಡಿಸಿ ಹಾಗೂ ಜಿಲ್ಲೆಯನ್ನು ಸದ್ಯ ಇರುವ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾರವಾರ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ‌್ಯಾಲಿ ಹಾಗೂ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.

ಈ ಹಿಂದೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ಅವರು ನೀಡಿದ್ದ ಕರೆಯಂತೆ, ನಗರದ ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆಯನ್ನು ಆರಂಭಿಸಲಾಯಿತು. ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮಂಗಳೂರು ಪೀಠ ನಮಗೆ ಬೇಡವೇ ಬೇಡ ಎಂದು ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲರು, ಧಾರವಾಡ ಪೀಠದ ವ್ಯಾಪ್ತಿಗೆ ಒಳಪಡುವ ಎಂಟು ಜಿಲ್ಲೆಗಳ ವಕೀಲರ ಸಂಘಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಪ್ರತಿಭಟನಾ ಮೆರವಣಿಗೆಯು ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರವನ್ನು ರವಾನಿಸಲಾಯಿತು.

ಆರ್ಥಿಕ ಹೊರೆ ಹಾಗೂ ಭಾಷಾ ಸಮಸ್ಯೆ: ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸಿದ್ದೇ ಆದಲ್ಲಿ, ಕಕ್ಷಿದಾರರಿಗೆ ಪ್ರಯಾಣದ ದೂರ, ಸಮಯ ಹಾಗೂ ಆರ್ಥಿಕ ವೆಚ್ಚ ಅಪಾರವಾಗಿ ಹೆಚ್ಚಾಗಲಿದೆ. ಇದು ‘ಮನೆ ಬಾಗಿಲಿಗೆ ನ್ಯಾಯ’ ದೊರಕಿಸುವ ಮೂಲ ಉದ್ದೇಶಕ್ಕೇ ದೊಡ್ಡ ಧಕ್ಕೆಯನ್ನು ತರುತ್ತದೆ. ಜೊತೆಗೆ ಆಡಳಿತಾತ್ಮಕ ಹಾಗೂ ಭಾಷಾ ಸಮಸ್ಯೆಗಳೂ ಎದುರಾಗಲಿವೆ ಎಂಬ ಆತಂಕವನ್ನು ಹೋರಾಟಗಾರರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘ ಸೇರಿದಂತೆ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟ, ಕನ್ನಡ ಪರ ಸಂಘಟನೆ, ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಈ ಸಂದರ್ಭದಲ್ಲಿ ಸುರಿಯುವ ಭಾರಿ ಮಳೆಯನ್ನು ಲೆಕ್ಕಿಸದೆ, ಸಾವಿರಾರು ಜನರ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಮನವಿ ಸಲ್ಲಿಸಿದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250