ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಸಂಸ್ಥೆಯಾದ ರೆವಿಂಟೊ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಬಿಸಿನೆಸ್ ಡೆವಲಪ್ಮೆಂಟ್ ಅಧಿಕಾರಿ ಸುಮಲತಾ ಶೇಟಿಗಾರ ಅವರು ಧ್ವಜಾರೋಹಣ ನೆರವೇರಿಸಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಇದೇ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ದಿನದ ಮಹತ್ವ, ದೇಶದ ಪ್ರಗತಿಯಲ್ಲಿ ನಾಗರಿಕರ ಪಾತ್ರ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳ ಕುರಿತು ಮಾತನಾಡಿದರು.
ನಂತರ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿತೇಂದ್ರ ಶೆಟ್ಟಿ ಅವರು ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸ್ಮರಿಸಿದರು. ಸಂಸ್ಥೆಯ ನಿರ್ದೇಶಕರಾದ ಪ್ರಖ್ಯಾತ ಶೆಟ್ಟಿ ಅವರು 80ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಮಹತ್ವವನ್ನು ವಿವರಿಸಿ, ರಾಷ್ಟ್ರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರದೀಪ ಗುನಗಿ ಅವರು ಆಕರ್ಷಕ ಕವಾಯತು ನಡೆಸಿಕೊಟ್ಟರು. ಅಲ್ಲದೆ, ತಮ್ಮ ಸುಮಧುರ ಕಂಠದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಡಿಜಿಎಂ ಹಾಗೂ ಮುಖ್ಯ ವ್ಯವಸ್ಥಾಪಕರಾದ ಪವನ ಶೆಟ್ಟಿ, ಪ್ರೊಡಕ್ಷನ್ ಹೆಡ್ ಕಿರಣ ಗೌಡ, ಲ್ಯಾಬ್ ಹೆಡ್ ವೈಭವ ನಾಯ್ಕ, ಶಶಿಕುಮಾರ, ಪರ್ಚೇಸ್ ಮ್ಯಾನೇಜರ್ ಪ್ರದೀಪ ಗುನಗಿ, ಅಕೌಂಟ್ ಮ್ಯಾನೇಜರ್ ಸಾಯಿ ಪ್ರಸಾದ್, ಪ್ರೀತಿಶ್ ಬಾಂದೇಕರ, ಅನಂತ ನಾಯ್ಕ, ಸತೀಶ ಆಚಾರಿ, ಶುಭಂ ನಾಯ್ಕ, ರೂಪೇಶ್ ನಾಯ್ಕ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ಕಾರ್ಮಿಕರು ಹಾಗೂ ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
