ಕಾರವಾರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು ಹಾಗೂ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಸಚಿವರು, ಕೇಂದ್ರ ಹಣಕಾಸು ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದ ಮುಖಂಡರು, ರಾಜ್ಯ ಸರ್ಕಾರ ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಹಿಂಪಡೆಯದೇ ತಕ್ಷಣವೇ ಜಾರಿಗೊಳಿಸಬೇಕು ಮತ್ತು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಇಪಿಎಫ್-95 ಕನಿಷ್ಠ ಪಿಂಚಣಿಯನ್ನು ₹1,000 ದಿಂದ ₹7,500 ಕ್ಕೆ ಹಾಗೂ ಇಪಿಎಫ್ ವಂತಿಗೆ ಮಿತಿಯನ್ನು ₹30,000 ಕ್ಕೆ ಹೆಚ್ಚಿಸುವುದರ ಜೊತೆಗೆ ಎಲ್ಲ ವಿಭಾಗದ ಕಾರ್ಮಿಕರಿಗೂ ಹೆಚ್ಚುವರಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಇಎಸ್ಐ ವ್ಯಾಪ್ತಿಯ ಮಿತಿಯನ್ನು ₹42,000 ಕ್ಕೆ ಏರಿಸಿ ಗರಿಷ್ಠ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವುದು, ಗ್ರಾಚ್ಯುಟಿ ಅವಧಿಯನ್ನು 15 ದಿನಗಳಿಂದ ಒಂದು ತಿಂಗಳಿಗೆ ಹಾಗೂ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಏರಿಸುವುದು ಮತ್ತು ಬೋನಸ್ ಮಿತಿಯನ್ನು ₹7,000 ದಿಂದ ₹18,000 ಕ್ಕೆ ಪರಿಷ್ಕರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಎನ್‌ಎಚ್‌ಎಂ ನೌಕರರ ಮಾಸಿಕ ಗೌರವಧನ ಹೆಚ್ಚಿಸಿ ಅವರನ್ನು ಕಾಯಂಗೊಳಿಸಬೇಕು, ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಸೇವಾ ಹಿರಿತನದ ಆಧಾರದ ಮೇಲೆ ಖಾಯಂಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 5 ದಿನಗಳ ಕೆಲಸದ ಪದ್ಧತಿ ಜಾರಿ, ಕಾರ್ಮಿಕ ಸಂಹಿತೆಗಳಲ್ಲಿನ ಕಾರ್ಮಿಕ ವಿರೋಧಿ ನಿಬಂಧನೆಗಳ ತಿದ್ದುಪಡಿ, ಕಟ್ಟಡ ಕಾರ್ಮಿಕ ಮಂಡಳಿಯ ಭ್ರಷ್ಟಾಚಾರದ ತನಿಖೆ ಹಾಗೂ ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳ ಉದ್ಯೋಗ ಮತ್ತು ವೇತನ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದ್ದು, ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾದ ಸಂದೀಪ ಗೋಕರ್ಣಕರ್, ನಾರಾಯಣ ಪಟಗಾರ, ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ ನಾಯ್ಕ, ಪ್ರಮುಖರಾದ ಸದಾನಂದ ಗೌಡ, ಟೆಲಿಕಾಂ ಮಜ್ದೂರ್ ಸಂಘದ ಗಣೇಶ್ ನಾಯ್ಕ, ಸಂತೋಷ್ ನಾಯ್ಕ, ಪ್ರಶಾಂತ್ ನಾಯ್ಕ ಸೇರಿದಂತೆ ಹಲವು ಕಾರ್ಮಿಕರು ಉಪಸ್ಥಿತರಿದ್ದರು.
