ಶಿರಸಿ: ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿ ರಸ್ತೆಗಿಳಿಸಿದ ವಾಹನ ಮಾಲಕರಿಗೆ ಶಿರಸಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ವಾಹನ ಮಾಲಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
ನಗರದ ಹುಬ್ಬಳ್ಳಿ ರಸ್ತೆ ಬಳಿ ಶಿರಸಿ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟರ್‌ವೊಂದನ್ನು ತಡೆದು ಪರಿಶೀಲಿಸಲಾಯಿತು. ಸ್ಕೂಟರ್ ಚಲಾಯಿಸುತ್ತಿದ್ದವರು ಅಪ್ರಾಪ್ತ ವಯಸ್ಸಿನ ಬಾಲಕರು ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ತನಿಖೆ ಪೂರ್ಣಗೊಳಿಸಿದ ಬಳಿಕ ದೋಷಾರೋಪಣಾ ಪತ್ರವನ್ನು ಶಿರಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನ ಮಾಲಕರನ್ನು ತಪ್ಪಿತಸ್ಥರೆಂದು ಘೋಷಿಸಿ, ತಲಾ ₹25 ಸಾವಿರ ದಂಡ ವಿಧಿಸಿದೆ.
ಅಪ್ರಾಪ್ತರ ಕೈಗೆ ವಾಹನ ನೀಡಿ ರಸ್ತೆಗಿಳಿಸುವುದರಿಂದ ಅವರ ಜೀವಕ್ಕೆ ಮಾತ್ರವಲ್ಲದೆ ಇತರರ ಸುರಕ್ಷತೆಗೂ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ ವಾಹನ ಮಾಲಕರು ಹಾಗೂ ಪೋಷಕರು ಎಚ್ಚರಿಕೆ ವಹಿಸಬೇಕೆಂಬ ಸಂದೇಶವನ್ನು ಈ ತೀರ್ಪು ನೀಡಿದೆ.
