ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆ: ಕ್ರಮಕ್ಕೆ ಆಗ್ರಹಿಸಿ ಶಾಸಕ ಆರ್.ವಿ.ಡಿಗೆ ಮನವಿ

Pakka News Web • 25 ಆಗಸ್ಟ್ 2026,

ದಾಂಡೇಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೀವ್ರವಾಗಿ ಕಾಡುತ್ತಿರುವ ಉಪನ್ಯಾಸಕರು ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ವತಿಯಿಂದ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.

ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ ಹಾಗೂ ಬಿ.ಸಿ.ಎ ಪದವಿ ತರಗತಿಗಳು ನಡೆಯುತ್ತಿದ್ದು, ನೂರಾರು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅಗತ್ಯಕ್ಕೆ ತಕ್ಕಂತೆ ಬೋಧಕ ಸಿಬ್ಬಂದಿ ಇಲ್ಲದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಿನ್ನಡೆಯುಂಟುಮಾಡಿದೆ. ಪ್ರಮುಖವಾಗಿ ಬಿ.ಸಿ.ಎ ವಿಭಾಗದಲ್ಲಿ 146 ವಿದ್ಯಾರ್ಥಿಗಳಿದ್ದು, ಕನಿಷ್ಠ 8 ಉಪನ್ಯಾಸಕರು ಇರಬೇಕಾದ ಜಾಗದಲ್ಲಿ ಕೇವಲ ಒಬ್ಬರೇ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 7 ಹುದ್ದೆಗಳು ಖಾಲಿ ಇವೆ. ಜೊತೆಗೆ ಭೌತಶಾಸ್ತ್ರ ವಿಭಾಗದ 2 ಉಪನ್ಯಾಸಕರ ಹುದ್ದೆಗಳು ಹಾಗೂ ಅಗತ್ಯ ಕಚೇರಿ ಸಿಬ್ಬಂದಿ ಹುದ್ದೆಗಳು ಭರ್ತಿಯಾಗದೆ ಉಳಿದಿವೆ.

ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದ್ದರೂ, ಸಿಬ್ಬಂದಿ ಕೊರತೆಯಿಂದಾಗಿ ಕೆಲವು ವಿಷಯಗಳ ತರಗತಿಗಳು ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ. ಇದು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನೇ ನಂಬಿಕೊಂಡಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಕಾಲೇಜಿಗೆ ತಕ್ಷಣವೇ ನುರಿತ ಉಪನ್ಯಾಸಕರು ಮತ್ತು ಕಚೇರಿ ಸಿಬ್ಬಂದಿಯನ್ನು ನೇಮಿಸಬೇಕು ಹಾಗೂ ಕಾಲೇಜು ಸಂಪರ್ಕ ರಸ್ತೆ ಮತ್ತು ಬೀದಿ ದೀಪಗಳ ಮೂಲಸೌಕರ್ಯವನ್ನು ಒದಗಿಸಬೇಕೆಂದು ನಿಯೋಗವು ಶಾಸಕರಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಅಕ್ರಂ ಎ. ಖಾನ್, ಉಪಾಧ್ಯಕ್ಷರಾದ ಅಶೋಕ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡ್ಡಪ್ಪನವರ, ಪದಾಧಿಕಾರಿಗಳಾದ ಮೊಹಮ್ಮದ್ ಗೌಸ್ ಬೆಟಗೇರಿ, ಧನಂಜಯ ಕಲಗುಟಕರ, ಫಾರೂಕ್ ಶೇಖ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250