ಕಾರವಾರ: ಹಿಂದಿನ ಸಮೀಕ್ಷೆಗಳ ಸಂದರ್ಭದಲ್ಲಿ ಕೈಬಿಟ್ಟುಹೋಗಿರುವ 1978ರ ಪೂರ್ವದ ಅರ್ಹ ಅರಣ್ಯ ಭೂಮಿ ಒತ್ತುವರಿದಾರರ ಪ್ರಕರಣಗಳನ್ನು ಮರುಸಮೀಕ್ಷೆ ನಡೆಸಿ ಮಂಜೂರಾತಿ ನೀಡಲು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಅರಣ್ಯ ಮತ್ತು ಪರಿಸರ ಸಚಿವರಿಗೆ ಪತ್ರ ಬರೆದಿರುವ ಅವರು, ದಿನಾಂಕ 13-03-2015 ರಂದು ಸರ್ಕಾರ ಹೊರಡಿಸಿರುವ ಮಹತ್ವದ ಸುತ್ತೋಲೆಯನ್ನು ಈವರೆಗೂ ಇಲಾಖೆ ಅನುಷ್ಠಾನಕ್ಕೆ ತಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1978ರ ಪೂರ್ವದ ಅರಣ್ಯ ಭೂಮಿ ಒತ್ತುವರಿ ಸಕ್ರಮಕ್ಕೆ ಸಂಬಂಧಿಸಿದಂತೆ ಅರ್ಹರನ್ನು ಮರುಸಮೀಕ್ಷೆ ಮೂಲಕ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ್ಯದ ಸಾವಿರಾರು ಬಡ ರೈತರು ತಮ್ಮ ಸಾಂಪ್ರದಾಯಿಕ ಅಧಿಭೋಗದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ, ಸರ್ಕಾರದ ಅಧಿಕೃತ ಆದೇಶ ತಮಗೆ ತಲುಪಿಲ್ಲವೆಂದು ಕೆಲವು ಡಿಎಫ್‌ಒಗಳು ಹಾರಿಕೆಯ ಉತ್ತರ ನೀಡುತ್ತಿರುವ ವಿಚಾರವನ್ನೂ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಪಶ್ಚಿಮಘಟ್ಟ ವ್ಯಾಪ್ತಿಯ ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಲಕ್ಷಾಂತರ ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ಜನರು ತಲೆತಲಾಂತರಗಳಿಂದ ಅರಣ್ಯ ಭೂಮಿಯನ್ನೇ ನಂಬಿ ಬದುಕುತ್ತಿದ್ದಾರೆ. 1996ರಲ್ಲೇ ಕೇಂದ್ರ ಸರ್ಕಾರವು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯನ್ವಯ 1978ರ ಪೂರ್ವದ ಒತ್ತುವರಿಗಳನ್ನು ಮಂಜೂರಿಗೆ ಶಿಫಾರಸು ಮಾಡಲು ಸೂಚಿಸಿತ್ತು.
ಆದರೆ ಅಂದಿನ ಸಮೀಕ್ಷೆಯ ಲೋಪಗಳಿಂದಾಗಿ ಸಾವಿರಾರು ಅರ್ಹರು ಹೊರಗುಳಿದಿರುವುದು ಅಂದಿನ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಭೆಯಲ್ಲೇ ಸಾಬೀತಾಗಿತ್ತು. ಆದಾಗ್ಯೂ ಈ ನಿರ್ಣಯ ದಶಕಗಳಿಂದ ಕಡತದಲ್ಲೇ ಉಳಿದುಕೊಂಡಿದ್ದು, ಸರ್ಕಾರ ಇನ್ನಾದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಕೊಚರೇಕರ ಆಗ್ರಹಿಸಿದ್ದಾರೆ.
