ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮಕ್ಕಳ ಸುರಕ್ಷತೆ ಮರೆತ ಶಾಲೆ? 

Pakka News Web • 31 ಆಗಸ್ಟ್ 2026,

ಶಿರಸಿ: ಶಿಕ್ಷಣದ ಜೊತೆಗೆ ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನೂ ಹೊತ್ತಿರಬೇಕಾದ ಶಾಲೆಯಲ್ಲೇ ಮಕ್ಕಳ ಜೀವವನ್ನು ಅಪಾಯಕ್ಕೆ ತಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ವಿದ್ಯಾರ್ಥಿಗಳನ್ನು ಅಪಾಯಕಾರಿ ಹಂಚಿನ ಮೇಲ್ಛಾವಣಿಗೆ ಹತ್ತಿಸಿ ಸ್ವಚ್ಛತಾ ಕಾರ್ಯ ಮಾಡಿಸಿರುವ ಘಟನೆ ಪೋಷಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಜಾರುವ ಸಾಧ್ಯತೆಯಿರುವ ಹಂಚಿನ ಮೇಲ್ಛಾವಣಿಗೆ ಮಕ್ಕಳನ್ನು ಹತ್ತಿಸಿ ಕೆಲಸ ಮಾಡಿಸಿರುವುದು ಪ್ರಶ್ನೆಗಳಿಗೆ ಕಾರಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಕಾಲು ಜಾರಿ ಕೆಳಗೆ ಬೀಳುವ ಅಪಾಯವಿದ್ದು, ಈ ವೇಳೆ ಯಾವುದೇ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂಬ ಪ್ರಶ್ನೆಯನ್ನು ಪೋಷಕರು ಮುಂದಿಟ್ಟಿದ್ದಾರೆ.

ಶಾಲೆಗೆ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆಯೇ ಹೊರತು, ಜೀವದ ಹಂಗು ತೊರೆದು ಅಪಾಯಕಾರಿ ಸ್ಥಳಗಳಲ್ಲಿ ಸ್ವಚ್ಛತಾ ಕೆಲಸ ಮಾಡಲು ಅಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಂದ ಇಂತಹ ಕೆಲಸ ಮಾಡಿಸಿರುವುದು ಶಿಕ್ಷಕರ ಹಾಗೂ ಶಾಲಾ ಆಡಳಿತದ ಬೇಜವಾಬ್ದಾರಿತನವನ್ನು ಬಯಲಿಗೆಳೆದಿದೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿ ಇಂತಹ ಅಪಾಯಕಾರಿ ಕಾರ್ಯಕ್ಕೆ ಅವರನ್ನು ಬಳಸಿರುವುದು ಸತ್ಯವಾಗಿದ್ದರೆ, ಹೊಣೆಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಯಾವುದೇ ದುರಂತ ಸಂಭವಿಸುವ ಮುನ್ನವೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ ಎಂಬ ಆಗ್ರಹ ಈಗ ಬಲವಾಗುತ್ತಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250