ಭಟ್ಕಳ: ಭಟ್ಕಳ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ 2024ರ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ರಾಣು ಗುಪ್ತ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಿಹಾರ ಮೂಲದ ರಾಣು ಗುಪ್ತ ಅವರು 2024ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಐಪಿಎಸ್ ಸೇವೆಗೆ ಸೇರ್ಪಡೆಯಾದ ಬಳಿಕ ಅವರು ಕಳೆದ ಡಿಸೆಂಬರ್ 29ರಿಂದ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪ್ರಾಯೋಗಿಕ ತರಬೇತಿ (ಡಿಪಿಟಿ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತರಬೇತಿ ಅವಧಿಯ ಬಳಿಕ ಇದೀಗ ಅವರಿಗೆ ಮಹತ್ವದ ಹೊಣೆಗಾರಿಕೆ ನೀಡಲಾಗಿದ್ದು, ಭಟ್ಕಳ ಪೊಲೀಸ್ ಉಪವಿಭಾಗದ ಡಿವೈಎಸ್ಪಿಯಾಗಿ ನಿಯೋಜಿಸಲಾಗಿದೆ. ಭಟ್ಕಳ, ಹೊನ್ನಾವರ ಸೇರಿದಂತೆ ಉಪವಿಭಾಗದ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ಆಡಳಿತದ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.
ಈ ಹಿಂದೆ ಭಟ್ಕಳ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಅವರನ್ನು ಬೆಂಗಳೂರು ಡಿಜಿ ಕಚೇರಿಗೆ ರಿಪೋರ್ಟ್ ಮಾಡಲು ಸೂಚಿಸಲಾಗಿದೆ ಎನ್ನಲಾಗಿದೆ.
ಯುವ ಐಪಿಎಸ್ ಅಧಿಕಾರಿಯೊಬ್ಬರ ನೇಮಕದೊಂದಿಗೆ ಭಟ್ಕಳ ಉಪವಿಭಾಗದ ಪೊಲೀಸ್ ಆಡಳಿತದಲ್ಲಿ ಹೊಸ ಬದಲಾವಣೆ ಕಂಡುಬಂದಿದೆ.
