ಕುಮಟಾ: ವಾಹನ ಖರೀದಿಗಾಗಿ ಪಡೆದ ಸಾಲದ ಕಂತುಗಳನ್ನು ಪಾವತಿಸದೆ, ಸಾಲಕ್ಕೆ ಸಂಬಂಧಿಸಿದ ವಾಹನವನ್ನು ಮರೆಮಾಚಿ ಹಣಕಾಸು ಸಂಸ್ಥೆಗೆ ವಂಚನೆ ಮಾಡಿರುವುದಲ್ಲದೆ, ಸಾಲ ವಸೂಲಾತಿಗೆ ತೆರಳಿದ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವಳಿ ನಾಡುಮಾಸ್ತೇರಿಯ ನಿವಾಸಿಗಳಾದ ಮಹಮ್ಮದ ಜುನೇದ ಅಬ್ದುಲ್ ಖಾದರ ಸಾಬ (26) ಮತ್ತು ಸಂತೋಷ ಗೋವಿಂದ ನಾಯ್ಕ (36) ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಕುರಿತು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ನ ಮುಣಕಿ ಕುಮಟಾ ಶಾಖೆಯ ಅಸಿಸ್ಟಂಟ್ ಬ್ಯುಸಿನೆಸ್ ಮ್ಯಾನೇಜರ್ ಕೃಷ್ಣ ತಂದೆ ಸುಕ್ಕು ಹರಿಕಂತ್ರ ಅವರು ದೂರು ನೀಡಿದ್ದಾರೆ.
ದೂರು ಪ್ರಕಾರ, ಮೊದಲ ಆರೋಪಿ ಕಳೆದ 2025ರ ಸೆ.30ರಂದು ವಾಹನ ಖರೀದಿಗಾಗಿ ಕುಮಟಾದ ಶ್ರೀರಾಮ್ ಫೈನಾನ್ಸ್ ಶಾಖೆಯಿಂದ 7 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣದಲ್ಲಿ ಕೆಎ-01/ಎಫ್-2334 ನೋಂದಣಿ ಸಂಖ್ಯೆಯ ಫೋರ್ಸ್ ಟೆಂಪೋ ಟ್ರಾವೆಲರ್ ವಾಹನವನ್ನು ಖರೀದಿಸಲಾಗಿತ್ತು. ಸಾಲಕ್ಕೆ ಎರಡನೇ ಆರೋಪಿ ಜಾಮೀನುದಾರರಾಗಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಲೋನ್ ಕಮ್ ಹೈಪೋಥೆಕೇಷನ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಂತರ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯು ಬಾಕಿ ಹಣ ವಸೂಲಾತಿಗೆ ಕ್ರಮ ಕೈಗೊಂಡು ವಾಹನವನ್ನು ಮರುಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ವೇಳೆ ವಾಹನವನ್ನು ಆರೋಪಿಗಳು ಉದ್ದೇಶಪೂರ್ವಕವಾಗಿ ಮರೆಮಾಚಿ, ಅದರ ಸ್ಥಳವನ್ನು ಬದಲಾಯಿಸಿ ಸಂಸ್ಥೆಯ ಸಿಬ್ಬಂದಿಗೆ ಪತ್ತೆಯಾಗದಂತೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಾಹನ ವಶಕ್ಕೆ ಪಡೆಯಲು ಹಾಗೂ ಸಾಲದ ಹಣ ವಸೂಲಿ ಮಾಡಲು ತೆರಳಿದ ಫೈನಾನ್ಸ್ ಸಿಬ್ಬಂದಿಗೆ ಆರೋಪಿಗಳು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಮೂಲಕ ಹಣಕಾಸು ಸಂಸ್ಥೆಗೆ ವಂಚನೆ ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಆರೋಪದಡಿ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಫ್ಸಿ ಕುಮಟಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
