ರೇಷನ್ ಕಾರ್ಡ್ ಇ-ಕೆವೈಸಿಗಾಗಿ ದಿನಗಟ್ಟಲೆ ಸರದಿಯಲ್ಲಿ ನಿಂತು, ಸರ್ವರ್ ಸಮಸ್ಯೆಯಿಂದ ವಾಪಸ್ ತೆರಳುತ್ತಿದ್ದೀರಾ? ಹಾಗಾದರೆ ನಿಮಗೆ ಇದು ಮಹತ್ವದ ಸುದ್ದಿ. ಇ-ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಮತ್ತಷ್ಟು ಸಮಯ ನೀಡಿದ್ದು, ರೇಷನ್ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ.
ಸೆಪ್ಟೆಂಬರ್ 30ಕ್ಕೆ ಅಂತ್ಯವಾಗಬೇಕಿದ್ದ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯ ಗಡುವನ್ನು ಇದೀಗ ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ನಿಗದಿತ ಅವಧಿಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದ ಫಲಾನುಭವಿಗಳಿಗೆ ಈ ವಿಸ್ತರಣೆ ನೆರವಾಗಲಿದೆ.
ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳು ಹಾಗೂ ಸೇವಾ ಕೇಂದ್ರಗಳಲ್ಲಿ ಇ-ಕೆವೈಸಿಗಾಗಿ ಜನರು ಸರದಿಯಲ್ಲಿ ನಿಲ್ಲುತ್ತಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳ್ಳದೆ ಹಲವರು ಗಂಟೆಗಟ್ಟಲೆ ಕಾದು ಮನೆಗೆ ಮರಳುವಂತಾಗಿತ್ತು. ವೃದ್ಧರು, ಮಹಿಳೆಯರು ಹಾಗೂ ದಿನಗೂಲಿ ಕಾರ್ಮಿಕರು ಇದರಿಂದ ಹೆಚ್ಚಿನ ತೊಂದರೆ ಅನುಭವಿಸಿದ್ದರು.
ಇದೀಗ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಇನ್ನೂ 20 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಇ-ಕೆವೈಸಿ ಬಾಕಿ ಉಳಿಸಿಕೊಂಡಿರುವ ಅರ್ಹ ಫಲಾನುಭವಿಗಳು ಆತುರಪಡುವ ಅಗತ್ಯವಿಲ್ಲ.
ಇಷ್ಟೇ ಅಲ್ಲ, ರೇಷನ್ ಪಡೆಯುವವರ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯ ಅವಧಿಯನ್ನೂ ಹೆಚ್ಚಿಸಲಾಗಿದೆ. ಇನ್ನು ಮುಂದೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ಅಂಗಡಿಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಪಡಿತರ ವಿತರಣೆ ನಡೆಯಲಿದೆ.
ಹೀಗಾಗಿ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಆಗದೆ ಪರದಾಡುತ್ತಿದ್ದ ರೇಷನ್ ಕಾರ್ಡ್ದಾರರಿಗೆ ಗಡುವು ವಿಸ್ತರಣೆ ನೆಮ್ಮದಿ ತಂದಿದ್ದರೆ, ಹೊಸ ಸಮಯದ ವ್ಯವಸ್ಥೆ ಕೆಲಸಕ್ಕೆ ತೆರಳುವವರಿಗೆ ಪಡಿತರ ಪಡೆಯಲು ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
ಇ-ಕೆವೈಸಿಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದೀರಾ? ಈ ಸುದ್ದಿ ನಿಮಗಾಗಿ!
