ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

9 ವರ್ಷದಲ್ಲಿ ಕೇವಲ 1500 ರೂ. ಗೌರವಧನ ಹೆಚ್ಚಳ!

Pakka News Web • 6 ಆಕ್ಟೋ 2026,

ಕಾರವಾರ: ಕನಿಷ್ಠ ₹15 ಸಾವಿರ ಮಾಸಿಕ ವೇತನ ನಿಗದಿ, ಬಾಕಿ ಇರುವ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಮತ್ತು ಮೊಬೈಲ್ ಮೂಲಕ ಕೆಲಸ ಮಾಡುವಂತೆ ಒತ್ತಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯಾದ್ಯಂತ ನಡೆಯುತ್ತಿರುವ ‘ಪ್ರತಿಭಟನಾ ಸಪ್ತಾಹ’ದ ಅಂಗವಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಗೌರವ ಸಲಹೆಗಾರ ಗಂಗಾಧರ ಬಡಿಗೇರ, ಕಳೆದ ಒಂಬತ್ತು ವರ್ಷಗಳಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಕೇವಲ ₹1,500ರಷ್ಟು ಮಾತ್ರ ಹೆಚ್ಚಳವಾಗಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಕಡಿಮೆ ಆದಾಯದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಹೇಳಿದರು. ಕಳೆದ ಒಂದು ವರ್ಷದಿಂದ ಗೌರವಧನ ಹಾಗೂ ಪ್ರೋತ್ಸಾಹಧನ ನಿಗದಿತ ಸಮಯಕ್ಕೆ ದೊರೆಯದೆ, ಕೆಲಸ ಮಾಡಿದರೂ ಪೂರ್ಣ ಪ್ರಮಾಣದ ಹಣ ಕೈ ಸೇರುತ್ತಿಲ್ಲ. ಹೀಗಾಗಿ ಕೇಂದ್ರದ ಪ್ರೋತ್ಸಾಹಧನ ಹಾಗೂ ರಾಜ್ಯದ ಗೌರವಧನವನ್ನು ಒಟ್ಟುಗೂಡಿಸಿ ಕನಿಷ್ಠ ₹15 ಸಾವಿರ ಮಾಸಿಕ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷೆ ಪದ್ಮಾ ಚಲುವಾದಿ ಮಾತನಾಡಿ, ತಾಂತ್ರಿಕ ತೊಂದರೆ ಮತ್ತು ಸರ್ವರ್ ಸಮಸ್ಯೆಗಳ ನಡುವೆಯೂ ‘ಸಮಸ್ತ’ ಆ್ಯಪ್‌ನಲ್ಲಿ ಕಡ್ಡಾಯವಾಗಿ ಕೆಲಸ ಮಾಡುವಂತೆ ಆಶಾ ಕಾರ್ಯಕರ್ತೆಯರಿಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು. ಡಿಜಿಟಲ್ ವ್ಯವಸ್ಥೆಗೆ ವಿರೋಧವಿಲ್ಲ. ಆದರೆ ಒಂದೆಡೆ ಭೌತಿಕ ದಾಖಲೆ, ಮತ್ತೊಂದೆಡೆ ಮೊಬೈಲ್‌ನಲ್ಲಿ ದಾಖಲೆ ನಿರ್ವಹಿಸುವುದರಿಂದ ಆರೋಗ್ಯ ಸೇವೆಗಿಂತ ದಾಖಲೆ ಕೆಲಸಕ್ಕೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಆದ್ದರಿಂದ ಮೊಬೈಲ್ ಮೂಲಕ ಕೆಲಸ ಮಾಡುವಂತೆ ಒತ್ತಾಯಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ್ ದೊಡ್ಮನಿ, ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡಲು ಆಶಾ ಕಾರ್ಯಕರ್ತೆಯರನ್ನು ಯಾರೂ ಒತ್ತಾಯಿಸಬಾರದು ಎಂಬುದಾಗಿ ಜಿಲ್ಲೆಯಲ್ಲಿ ತಕ್ಷಣ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು. ಆಶಾ ಕಾರ್ಯಕರ್ತೆಯರ ಇತರ ಸಮಸ್ಯೆಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಲ್ಲಾಭಕಾಶ್ ಮಾತನಾಡಿ, ಸಮಸ್ಯೆಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಭೆಗೆ ಮುನ್ನ ಸಮಸ್ಯೆಗಳ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ವರದಿಯನ್ನು ಸಿದ್ಧಪಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷೆ ಪದ್ಮಾ ಚಲುವಾದಿ, ಉಪಾಧ್ಯಕ್ಷರಾದ ಕವಿತಾ ಗಾವಡ, ಶ್ವೇತಾ ಕಪಡಸ್ಕರ್, ಮಹಾಲಕ್ಷ್ಮಿ ನಾಯ್ಕ್, ಶೋಭಾ ನಾಯ್ಕ್, ಕಸ್ತೂರಿ ಮುಂಡಗೋಡ, ನಿವೇದಿತಾ ಕೊಳಂಬಕರ್, ಹಾಲಮ್ಮ ನಾಯ್ಕ್, ಆಶಾ ನಾಗೇಕರ್, ಪ್ರಭಾಮಣಿ ವರ್ಧಮಾನ್, ಅಶ್ವಿನಿ, ಕಲಾವತಿ ಪಾಟೀಲ್, ವೈಶಾಲಿ, ಪ್ರೀತಿ, ಸಂಗೀತ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250