ಕಾರವಾರ: ನಗರದ ಜಿ.ಕೆ. ರಾಮ್ ಕಟ್ಟಡದ ಸಮೀಪ ತೆರೆದಿದ್ದ ಚರಂಡಿಗೆ ಎಮ್ಮೆ ಬಿದ್ದು ಸಿಲುಕಿಕೊಂಡ ಘಟನೆ ಬುಧವಾರ ನಡೆದಿದೆ. ಚರಂಡಿಯಿಂದ ಹೊರಬರಲಾಗದೆ ಪರದಾಡುತ್ತಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು.
ಚರಂಡಿಗೆ ಎಮ್ಮೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚರಂಡಿಗೆ ಇಳಿದು ಎಮ್ಮೆಯನ್ನು ಮೇಲಕ್ಕೆತ್ತಿದರು. ಬಳಿಕ ಎಮ್ಮೆ ಸುರಕ್ಷಿತವಾಗಿ ಹೊರಬರುವಂತೆ ಮಾಡಿ ಕಾರ್ಯಾಚರಣೆ ಪೂರ್ಣಗೊಳಿಸಿದರು.

ನಗರದ ವಿವಿಧೆಡೆ ಚರಂಡಿಗಳು ತೆರೆದ ಸ್ಥಿತಿಯಲ್ಲಿರುವುದರಿಂದ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ. ಮನುಷ್ಯರು ಹಾಗೂ ಜಾನುವಾರುಗಳು ಚರಂಡಿಗೆ ಬೀಳುವ ಅಪಾಯವಿದ್ದು, ಸಂಬಂಧಿಸಿದ ನಗರಾಡಳಿತವು ತೆರೆದ ಚರಂಡಿಗಳಿಗೆ ಸೂಕ್ತ ಮುಚ್ಚಳ ಅಳವಡಿಸಿ ಅಪಾಯ ತಪ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
