ಕಾರವಾರ: ಸೀಬರ್ಡ್ ಯೋಜನೆಯಿಂದ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು, ಕಾರವಾರ–ಅಂಕೋಲಾದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸುವುದು ಹಾಗೂ ಕೈಗಾ ಭಾಗದ ಮೂಲಸೌಕರ್ಯ ಮತ್ತು ಉದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮೂರು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದರೊಂದಿಗೆ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಮತ್ತು ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಶಿಕ್ಷಣದ ಅವಕಾಶಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸೀಬರ್ಡ್ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ
ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಕುಟುಂಬಗಳ ಪರಿಹಾರ ಹಾಗೂ ಪುನರ್ವಸತಿ ಸಮಸ್ಯೆಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂದು ರೂಪಾಲಿ ನಾಯ್ಕ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಭೂ ಪರಿಹಾರಕ್ಕೆ ಸಂಬಂಧಿಸಿದ 18 ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದರೆ, ಸುಮಾರು 165 ಪ್ರಕರಣಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ಯರ್ಥಕ್ಕಾಗಿ ಕಾಯುತ್ತಿವೆ. ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಅಗಸೂರು ಮತ್ತು ಶಿರಗುಂಜಿ ಭಾಗಗಳಲ್ಲಿ ಪರ್ಯಾಯ ಭೂಮಿ ಹಂಚಿಕೆಗಾಗಿ ಸಮತಟ್ಟು ಮಾಡಲಾಗಿದ್ದ ಸುಮಾರು 800 ಎಕರೆ ಭೂಮಿಯನ್ನು ಅರ್ಹ ಸಂತ್ರಸ್ತರಿಗೆ ವಿತರಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ನಿರಾಶ್ರಿತ ಕುಟುಂಬಗಳಿಗೆ ತಲಾ ಒಂದು ಉದ್ಯೋಗ ನೀಡುವ ಪ್ರಕ್ರಿಯೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಅವರು ಗಮನ ಸೆಳೆದಿದ್ದಾರೆ.
2014ರಿಂದ 2026ರವರೆಗೆ ಸುಮಾರು 800 ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗಿದ್ದರೂ ಅವರಿಗೆ ಉದ್ಯೋಗ ದೊರೆತಿಲ್ಲ ಎಂದು ಉಲ್ಲೇಖಿಸಿರುವ ಅವರು, ಭೂ ಪರಿಹಾರ, ಪರ್ಯಾಯ ಭೂಮಿ ಹಂಚಿಕೆ ಹಾಗೂ ಉದ್ಯೋಗ ಒದಗಿಸುವ ಮೂಲಕ ಸೀಬರ್ಡ್ ಸಂತ್ರಸ್ತರ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೈಗಾ ಭಾಗದ ಮೂಲಸೌಕರ್ಯ, ಉದ್ಯೋಗಕ್ಕೆ ಆದ್ಯತೆ
ಕಾರವಾರ–ಕೈಗಾ ಭಾಗದ ಜನರು ಎದುರಿಸುತ್ತಿರುವ ಸಾರಿಗೆ, ವಿದ್ಯುತ್ ಹಾಗೂ ಉದ್ಯೋಗ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೂ ರೂಪಾಲಿ ನಾಯ್ಕ ಒತ್ತಾಯಿಸಿದ್ದಾರೆ. ಮಲ್ಲಾಪುರ–ಗೋಟೆಗಾಳಿ ನಡುವೆ ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವುದು, ಶೆಜವಾಡದಿಂದ ಕೈಗಾ ಸಮೀಪದ ಹರ್ಟುಗಾವರೆಗೆ 11 ಕೆವಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವುದು ಹಾಗೂ ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ಕೈಗಾದ ಎನ್ಪಿಸಿಐಎಲ್ ಘಟಕದ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರು ಹಾಗೂ ಸ್ಥಳೀಯರಿಗೆ ಶೇ. 80ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಗುತ್ತಿಗೆ ಆಧಾರಿತ ನೇಮಕಾತಿಯಲ್ಲಿ ವಿಧಿಸಲಾಗುತ್ತಿರುವ ಎರಡರಿಂದ ಮೂರು ವರ್ಷಗಳ ಅನುಭವದ ಕಡ್ಡಾಯ ಷರತ್ತನ್ನು ರದ್ದುಗೊಳಿಸಿ, ಸ್ಥಳೀಯ ನಿರುದ್ಯೋಗಿ ಯುವಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂಬ ಬೇಡಿಕೆಯನ್ನೂ ಪ್ರಸ್ತಾಪಿಸಿದ್ದಾರೆ.
ಕಾರವಾರ–ಅಂಕೋಲಾದಲ್ಲಿ ಐಐಟಿ ಸ್ಥಾಪನೆಗೆ ಒತ್ತಾಯ
ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ತಾಂತ್ರಿಕ ಶಿಕ್ಷಣವನ್ನು ಸ್ಥಳೀಯವಾಗಿಯೇ ಪಡೆಯಲು ಅನುಕೂಲವಾಗುವಂತೆ ಕಾರವಾರ–ಅಂಕೋಲಾದಲ್ಲಿ ಐಐಟಿ ಸ್ಥಾಪಿಸಬೇಕು ಎಂದು ರೂಪಾಲಿ ನಾಯ್ಕ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66 ಹಾಗೂ ರೈಲು ಸಂಪರ್ಕ ಹೊಂದಿರುವ ಕಾರವಾರ–ಅಂಕೋಲಾ ಪ್ರದೇಶವು ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ. ಇಲ್ಲಿ ಐಐಟಿ ಸ್ಥಾಪನೆಯಾದರೆ ಸಂಶೋಧನೆ, ನವೋದ್ಯಮ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾರವಾರದ ಕದಂಬ ನೌಕಾನೆಲೆಯ ಸಾಮೀಪ್ಯವು ನೌಕಾ ತಂತ್ರಜ್ಞಾನ, ಸಾಗರ ಎಂಜಿನಿಯರಿಂಗ್ ಮತ್ತು ರಕ್ಷಣಾ ಸಂಶೋಧನಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಲ್ಲದು. ಹೀಗಾಗಿ ಐಐಟಿ ಸ್ಥಾಪನೆಗೆ ಸೂಕ್ತ ಸರ್ಕಾರಿ ಭೂಮಿಯನ್ನು ಗುರುತಿಸಿ, ಯೋಜನೆಗೆ ಆದ್ಯತೆ ನೀಡುವಂತೆ ಅವರು ಕೋರಿದ್ದಾರೆ.
ಸೀಬರ್ಡ್ ಸಂತ್ರಸ್ತರ ಪುನರ್ವಸತಿ, ಕೈಗಾ ಭಾಗದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾರವಾರ–ಅಂಕೋಲಾದಲ್ಲಿ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಇಲಾಖೆಗಳ ಮೂಲಕ ಅಗತ್ಯ ಕ್ರಮ ಕೈಗೊಂಡು ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೆರವಾಗಬೇಕು ಎಂದು ರೂಪಾಲಿ ಎಸ್. ನಾಯ್ಕ ಆಗ್ರಹಿಸಿದ್ದಾರೆ.
